ಚಿಕ್ಕಬಳ್ಳಾಪುರ: ದಿನೇ ದಿನೇ ಬೆಳೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ಮಿಷನ್ ಅದ್ಭುತ ಸಂಸ್ಥೆಯಾಗಿದ್ದು, ಇದರ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. ಮಾನವೀಯತೆಯ ವಿಚಾರದಲ್ಲಿ ನನ್ನಲ್ಲಿ ದೊಡ್ಡ ಪರಿವರ್ತನೆಯನ್ನು ತಂದಿದೆ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರ ಅರವಿಂದ ಡಿ ಸಿಲ್ವ (Aravinda de Silva) ತಿಳಿಸಿದರು.
ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ”ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ”ದ 91ನೇ ದಿನದಂದು ಪಾಲ್ಗೊಂಡು ಸದ್ಗುರು ಶ್ರೀ ಮಧುಸೂಧನ ಸಾಯಿ ಅವರು ಪ್ರೇರಕ ಶಕ್ತಿಯಾಗಿದ್ದಾರೆ. ಈ ಸಂಸ್ಥೆಯ ಭಾಗವಾದ ಬಳಿಕ ನನ್ನಲ್ಲಿ ದೊಡ್ಡ ಬದಲಾವಣೆಯನ್ನು ಕಂಡುಕೊಂಡಿದ್ದೇನೆ ಎಂದು ವಿವರಿಸಿದರು.
ಬೌದ್ಧ ಗುರು ಬಟ್ಟರಮುಲ್ಲೆ ಅಮದಾಸನ ಥಿರೋ ಮಾತನಾಡಿ, ನಮ್ಮೆಲ್ಲರ ಹೃದಯಗಳು ಒಂದು ಲಯದಲ್ಲಿ ಇರುವುದರಿಂದ ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ. ನೀವು ಕಪ್ಪು ಅಥವಾ ಬಿಳಿ,ಪುರುಷ ಅಥವಾ ಮಹಿಳೆ, ಬಡವ ಅಥವಾ ಶ್ರೀಮಂತ ಎಂಬುದು ಮುಖ್ಯವಲ್ಲ. ಆದರೆ ನಾವೆಲ್ಲರೂ ಇಲ್ಲಿ ಬಂದಿರುವುದಕ್ಕೆ ಒಂದು ಉದ್ದೇಶವಿದೆ. ಅದೇ ಒಂದು ಜಗತ್ತು ಒಂದು ಕುಟುಂಬ. ಇದೊಂದು ಸುಂದರವಾದ ಸ್ಫೂರ್ತಿ ನೀಡುವ ಮಿಷನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಧಕರಿಗೆ ಪುರಸ್ಕಾರ, ಸನ್ಮಾನ
ಗ್ರಾನುಲೆಸ್ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಚಿಗುರುಪಾಟಿ ಮತ್ತು ಮಹೀಂದ್ರಾ ಫೈನಾನ್ಸ್ ನ ಮಾಜಿ ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾದ ರಮೇಶ್ ಜಿ ಅಯ್ಯರ್ ಅವರಿಗೆ ”ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ” ನೀಡಿ ಗೌರವಿಸಲಾಯಿತು.
ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್ ಶಿಪ್ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿರುವ ”ವಿಲೋ ಮೆಟರ್ ಅಂಡ್ ಪ್ಲಾಟ್ ಪಂಪ್ಸ್ ಪ್ರೈವೇಟ್ ಲಿಮಿಟೆಡ್” ಗೆ ”ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ” ನೀಡಿ ಗೌರವಿಸಲಾಯಿತು. ಕಂಪನಿಯ ಹಿರಿಯ ವ್ಯವಸ್ಥಾಪಕರಾದ ಬಿ ಸೆಂಥಿಲ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.
ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಬೆಂಬಲ ನೀಡುತ್ತಿರುವ ”ಲಕ್ಷಕ ಟೆಕ್ಸ್ ಎಲ್ಎಲ್ಪಿ” ಕಂಪನಿಗೆ ”ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ” ನೀಡಿ ಗೌರವಿಸಲಾಯಿತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಎಂಎನ್ ಪದ್ಮನಾಭನ್ ಪ್ರಶಸ್ತಿ ಸ್ವೀಕರಿಸಿದರು.
ಅನ್ನಪೂರ್ಣ ಟ್ರಸ್ಟ್ ಗೆ ಬೆಂಬಲ ನೀಡುತ್ತಿರುವ ನಾಟ್ ಸಲೂಷನ್ಸ್ ಪ್ರೈವೇಟ್ ಲಿಮಿಟೆಡ್ ಗೆ ”ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ” ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಮಂತ್ ಕುಮಾರ್ ಕೊನೂರು ಅವರು ಪ್ರಶಸ್ತಿ ಸ್ವೀಕರಿಸಿದರು.
ಶ್ರೀಲಂಕಾದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಡಾ ಕ್ರಿಸ್ಟೋಫರ್ ಸ್ಟಬ್ಸ್ ಮತ್ತು ರಂಜಿ ಸ್ಟಬ್ಸ್ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀಲಂಕಾದಲ್ಲಿ ಕಾರ್ಪೊರೇಟ್ ಆಡಳಿತಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಕುಶೀಲ್ ಗುಣಶೇಖರ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶ್ರೀಲಂಕಾದ ಪ್ರತಿನಿಧಿ ಡಾ ಮಿನಾಲಿ ಉತ್ಪಾಲ ಡಿಸ್ಸಾನಾಯಕೆ ಅವರು ತಮ್ಮ ದೇಶದ ಕಲೆ, ಸಂಸ್ಕೃತಿ, ಸಂಗೀತ, ಭಾಷೆ, ಪ್ರಸಿದ್ಧ ತಾಣಗಳು, ಖಾದ್ಯಗಳು, ಸಾಂಪ್ರದಾಯಿಕ ಉಡುಪು, ಅಧಾತ್ಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಮತ್ತೊಬ್ಬ ಪ್ರತಿನಿಧಿ ಮಹೇಶ್ವರಶರ್ಮಾ ಪ್ರತೀಪನ್ ಮಾತನಾಡಿ, ತಮ್ಮ ಜೀವನದಲ್ಲಿನ ಆಧ್ಯಾತ್ಮಿಕ ಪರಿವರ್ತನೆಯ ಅನುಭವ ಹಂಚಿಕೊಂಡರು.
ಈ ವೇಳೆ ಸದ್ಗುರು ಶ್ರೀ ಮಧುಸೂಧನ ಸಾಯಿ ಆರ್ಶೀವಚನ ನೀಡಿದರು.