ದೊಡ್ಡಬಳ್ಳಾಪುರ: ತಾಲೂಕಿನ ಆರೂಢಿ ಗ್ರಾಮದಲ್ಲಿ ಶ್ರೀ ಕನಕದಾಸ ಕುರುಬರ ಸಂಘದ ವತಿಯಿಂದ ಸಂತಶ್ರೇಷ್ಠ ಕನಕದಾಸರ (Kanakadasa) 500ನೇ ಜಯಂತೋತ್ಸವವನ್ನು ಇಂದು ಅದ್ಧೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ವೀರಗಾರಗಾಸೆ ಕುಣಿತ, ಕಳಸ ಹೊತ್ತ ಮಹಿಳೆಯರೊಂದಿಗೆ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ್ದ ಕನಕದಾಸರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಕನಕದಾಸರು ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ. ಭಕ್ತಿ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಕನಕದಾಸರು ದಾರ್ಶನಿಕ ಚಿಂತಕರು ಆಗಿದ್ದಾರೆ.
ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆಗೆ ಒತ್ತು ನೀಡುವ ಕನಕದಾಸರ ತತ್ವ ಸಿದ್ಧಾಂತಗಳು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಕನಕದಾಸರ ಕೀರ್ತನೆಗಳಲ್ಲಿ ಅಡಗಿರುವ ಸಾಮಾಜಿಕ ಸಂದೇಶಗಳನ್ನು ಅರಿತುಕೊಂಡು ಬಾಳಿದರೆ ಅದು ಸಮಾಜದ ಏಳಿಗೆಗೆ ಸಹಕಾರಿ ಆಗುತ್ತದೆ ಎಂದರು.
ಭಕ್ತಿಯೆ ಹರಿದಾಸ ಸಾಹಿತ್ಯದ ಪ್ರಮುಖ ಶಕ್ತಿ. ಕನಕದಾಸರು ಕರ್ನಾಟಕದ ಭಕ್ತಿ ಆಂದೋಲನದ ಪ್ರಮುಖ ಹರಿದಾಸರು. ಕನ್ನಡ ಭಾಷೆಯಲ್ಲಿ ಕೀರ್ತನೆಗಳನ್ನು ಸರಳವಾದ ಭಾಷೆಯ ಮೂಲಕ ಜನಸಾಮಾನ್ಯರಿಗೆ ತಲುಪಿಸಿದರು. ಜನಸಾಮಾನ್ಯರ ಭಾಷೆಯಲ್ಲಿ ಸಾಹಿತ್ಯ ರಚಿಸಿದ ಶಿವಶರಣರು ಮತ್ತು ಹರಿದಾಸರುಗಳಿಗೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ ಎಂದರು.