ಮಡಿಕೇರಿ: ತೋಟವೊಂದರಲ್ಲಿ ಕಾಳು ಮೆಣಸು ಕದ್ದು ಜೈಲು ಪಾಲಾಗಿದ್ದ ಯುವಕ ಜಾಮೀನಿನಲ್ಲಿ ಹೊರಗೆ ಬಂದ ಎರಡು ವಾರಗಳ ನಂತರ ಪತ್ನಿಗೆ ಲೈವ್ ವಿಡಿಯೊ ಮಾಡಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ (Suicide) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಕೋನ ಬಳಿ ನಡೆದಿದೆ.
ಮೃತನನ್ನು ಕಿಬ್ಬೆಟ್ಟ ಗ್ರಾಮದ ಕೀರ್ತಿ ಎಂದು ಗುರುತಿಸಲಾಗಿದೆ.
ಈತ ಯಡವಾರೆಯ ಕಾಫಿ ತೋಟದಲ್ಲಿ ಕಾಳು ಮೆಣಸು ಕದ್ದು ಜೈಲು ಸೇರಿದ್ದ. 15 ದಿವಸಗಳ ಹಿಂದೆ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ ಎನ್ನಲಾಗಿದೆ.
ಮಡಿಕೇರಿ ತಾಲೂಕಿನ ಬೋಯಿಕೇರಿ ಸಮೀಪದ ಸಿಂಕೋನದಲ್ಲಿರುವ ದೇವಸ್ಥಾನ ಸಮೀಪ ತೋಟವೊಂದಕ್ಕೆ ತೆರಳಿ ಊರಿನಲ್ಲಿದ್ದ ಪತ್ನಿಗೆ ಲೈವ್ ವಿಡಿಯೊ ಮಾಡಿ ಮನೆಗೆ ಬರುವಂತೆ ಕರೆದಿದ್ದನಂತೆ. ಈ ವೇಳೆ ಪತ್ನಿ ಮನೆಗೆ ಬರಲು ನಿರಾಕರಿಸಿದ್ದರು ಎನ್ನಲಾಗಿದೆ.
ಇದರಿಂದ ಮನನೊಂದು ವಿಡಿಯೊ ಲೈವ್‌ನಲ್ಲಿ ಮಾತನಾಡುತ್ತಾ ಮರಕ್ಕೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.