ತುಮಕೂರು: ಕಳೆದ ಮೂರು ತಿಂಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗದಿರುವ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ (Lakshmi Hebbalakara) ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಮೂರು ತಿಂಗಳು ಅಲ್ಲ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಎರಡು ತಿಂಗಳ ಹಣ ಮಾತ್ರ ಬಾಕಿ ಉಳಿದಿದ್ದು, ಶೀಘ್ರದಲ್ಲೇ ಪಾವತಿ ಮಾಡಲಾಗುವುದು.
ವಿವಿಧ ಯೋಜನೆಗಳೊಂದಿಗೆ ಗೃಹಲಕ್ಷ್ಮಿ ಯೋಜನೆಗೆ ತಿಂಗಳಿಗೆ 2,500 ಕೋಟಿ ಬೇಕಾಗುತ್ತದೆ. ಅವುಗಳ ಹೊಂದಾಣಿಕೆ ಕಾಣರ ಸ್ವಲ್ಪ ವಿಳಂಬ ಆಗುತ್ತಿದೆ. ಆದರೆ ಇದು ಕಾಳಜಿ ಇಲ್ಲವೆಂದಲ್ಲ, ಕಾಲ ಕಾಲಕ್ಕೆ ಫಲಾನುಭವಿಗಳಿಗೆ ಯೋಜನೆಯ ನೆರವು ಕಲ್ಪಿಸಲಾಗುತ್ತಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಹಿಂದಿನ ಬಜೆಟ್‌ನಲ್ಲಿ 1 ಸಾವಿರ ಗೌರವ ಧನ ಹೆಚ್ಚಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಮತ್ತೆ 1 ಸಾವಿರ ಹೆಚ್ಚಿಸಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ ನೀಡಿದರು.
ನಗರದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗೌರವ ಧನ ಹೆಚ್ಚಳದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಲ್ಲಿ ಶೇ.70ರಷ್ಟು ಮಂದಿ ಗೃಹಲಕ್ಷ್ಮಿ ನೆರವು ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಸಹಕಾರ ಬ್ಯಾಂಕ್‌ನಲ್ಲಿ 30 ಸಾವಿರದಿಂದ ₹5 ಲಕ್ಷದ ವರೆಗೆ ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದರು.
ನ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಗ್ರ 30 ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅಕ್ಕ ಪಡೆ, ಸಹಕಾರ ಬ್ಯಾಂಕ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
5 ಸಾವಿರ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ
ರಾಜ್ಯದ ಐದು ಸಾವಿರ ಅಂಗನವಾಡಿಗಳಲ್ಲಿ ಎಲ್‌ಜಿ-ಯುಕೆಜಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲಾಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಬಡಮಕ್ಕಳಿಗೂ ಸಿಗಬೇಕು ಎಂದು ಅಂಗನವಾಡಿಗಳಲ್ಲಿ ಎಲ್ ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಲಾಗುತ್ತಿದೆ.
ರಾಜ್ಯದ ಒಟ್ಟಾರೆ ಎಲ್ಲ ಅಂಗನವಾಡಿಗಳ ಪೈಕಿ 17 ಸಾವಿರ ಕಾರ್ಯಕರ್ತೆಯರು ಪದವೀಧರರಿದ್ದು, 4 ಸಾವಿರ ಸ್ನಾತಕೋತ್ತರ ಪದವೀಧರರಿದ್ದಾರೆ. ಇವರನ್ನು ಬಳಸಿಕೊಂಡು ಮೊದಲ ಹಂತದಲ್ಲಿ ಐದು ಸಾವಿರ ಅಂಗನವಾಡಿಗಳನ್ನು ಇದೇ 28ರಂದು ಆರಂಭಿಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.