ದೊಡ್ಡಬಳ್ಳಾಪುರ: ಸಂವಿಧಾನ (Constitution) ದಿನಾಚರಣೆ-2025 ಕಾರ್ಯಕ್ರಮ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನಗರದ ಸಿದ್ದಲಿಂಗಯ್ಯ ವೃತ್ತದ ಬಳಿಯಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಹಾಗೂ ಮಾಜಿ ಪ್ರಧಾನಿ ಜಗಜೀವನ ರಾಂ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂವಿಧಾನ ಜಾಗೃತಿ ಜಾಥಾ ನಡೆಯಿತು.
ಸಂವಿಧಾನ ಪೀಠಿಕೆಯುಳ್ಳ ಬೆಳ್ಳಿ ರಥದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಬೃಹತ್ ರಾಷ್ಟ್ರ ಧ್ವಜ ಹಿಡಿದು ಸಂಚರಿಸಿದರು.
ಸಂವಿಧಾನದ ಮಹತ್ವ ಸಾರುವ ಭಿತ್ತಿಪತ್ರಗಳು ಹಾಗೂ ಘೋಷಣೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ, ಭಗತ್ ಸಿಂಗ್ ಕ್ರೀಡಾಂಗಣದ ವೇದಿಕೆ ತಲುಪಿತು.
ಸದೃಢ ಪ್ರಜಾಪ್ರಭುತ್ವದ ಬುನಾದಿ
ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಭಾರತ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಪ್ರತಿಜ್ಞಾವಿಧಿಯಲ್ಲಿ ಭಾರತದ ಜನತೆಯಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುದಕ್ಕಾಗಿ ಭಾರತದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಾಗಿ ತಿಳಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಧೀರಜ್ ಮುನಿರಾಜ್, ಅಮೇರಿಕಾದಲ್ಲಿ ಟ್ರಂಪ್ ಆಡಳಿತ ಹಸ್ತಾಂತರವಾಗುವಾಗ ಕಾನೂನು ತೊಡಕು ಎದುರಾಗಿತ್ತು. ಆದರೆ ಭಾರತ ಸಂವಿಧಾನದ ಚುನಾವಣೆ ವ್ಯವಸ್ಥೆ ಜಗತ್ತಿಗೇ ಮಾದರಿಯಾಗಿದ್ದು, ಗ್ರಾಮ ಪಂಚಾಯಿತಿಯಿಂದ ಹಿಡಿದು, ಪ್ರಧಾನ ಮಂತ್ರಿಯವರೆಗೆ ಚುನಾವಣೆ ಆಯ್ಕೆಯಲ್ಲಿ ಯಾವುದೇ ಗೊಂದಲಗಳಿಲ್ಲ.
ಅಧಿಕಾರ ಮುಗಿದ ನಂತರ ಕೆಲ ಕ್ಷಣಗಳಲ್ಲಿಯೇ ಹಸ್ತಾಂತರ ಮಡಬೇಕಿದೆ. ದೇಶದ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡುವ ಮೂಲಕ ಸಮಾನತೆ, ಸಮಬಾಳು ಪರಿಕಲ್ಪನೆ ಹೊಂದಿರುವುದು ನಮ್ಮ ಸಂವಿದಾನ. ಇಂತಹ ಸಂವಿಧಾನದ ಆಶಯಗಳಿಗೆ ದಕ್ಕೆ ಬಾರದಂತೆ ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಸಂವಿಧಾನ ಕುರಿತಾಗಿ ಮಾತನಾಡಿದ ಉಪನ್ಯಾಸಕ ಎನ್.ಮಹೇಶ್, ದೇಶದಲ್ಲಿ ಬ್ರಿಟೀಷರ ಆಳ್ವಿಕೆಯಿದ್ದಾಗ ನಮ್ಮದೇ ಆಡಳಿತ ವ್ಯವಸ್ಥೆ ಬಂದು ನಾವು ಸ್ವತಂತ್ರ್ಯರಾಗಬೇಕೆನ್ನುವ ಕೂಗು ಇತ್ತು. ಅಂತೆಯೇ ದೇಶಕ್ಕೆ ಒಂದು ಸಂವಿಧಾನ ಬೇಕು ಎನ್ನುವ ಒತ್ತಾಯಗಳಿದ್ದವು. ಸಂವಿಧಾನವು 1949ರ ನವೆಂಬರ್ 26 ರಂದು ಸಾಕಾರಕ್ಕೆ ಬಂದು,1950ರ ಜನವರಿ 26ರಂದು ಅನುಷ್ಠಾನಕ್ಕೆ ತರಲಾಯಿತು.
ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಡಾ.ಬಾಬು ರಾಜೇಂದ್ರ ಪ್ರಸಾದ್ ಕಾರ್ಯ ನಿರ್ವಹಿಸಿದ್ದರು. ಕರಡು ಸಮಿತಿ ಅಧ್ಯಕ್ಷರಾಗಿದ್ದ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಫ್ರಾನ್ಸ್, ಸೋವಿಯತ್ ಒಕ್ಕೂಟ, ಐರ್ಲೆಂಡ್ ಜಪಾನ್ ಮೊದಲಾದ ದೇಶಗಳ ಸಂವಿಧಾನವನ್ನು ಅಭ್ಯಸಿಸಿ, ಅಳವಡಿಸಿಕೊಂಡು ಇದು ವಿಶ್ವದ ಯಾವುದೇ ಸ್ವತಂತ್ರ್ಯ ದೇಶಗಳ ಅತಿ ಉದ್ದವಾದ ಸಂವಿಧಾನವಾಗಿದೆ.
ಭಾರತದ ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್ 5 ಅನುಬಂಧಗಳು, 98 ತಿದ್ದುಪಡಿಗಳಿವೆ ಎಂದರು.