ಹೊಸಪೇಟೆ: ರೈತರು ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮವಾಗಿ ಪಡೆದಿರುವ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಲು ರಾಜ್ಯದಲ್ಲಿ 4.5 ಲಕ್ಷ ಪಂಪ್ ಸೆಟ್ ಗಳನ್ನು ಗುರುತಿಸಿ ಸಕ್ರಮಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಇದನ್ನು ಇದೇ ರೀತಿ ಮು೦ದುವರಿಸಲು ಸಾಧ್ಯವಿಲ್ಲ. ಈ ಬಗ್ಗೆ ಕ್ಯಾಬಿನೆಟ್ ಮುಂದೆ ತಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ (K.J. George) ತಿಳಿಸಿದರು.
ಮೂಲ ಅಕ್ರಮ ಸಕ್ರಮಕ್ಕಾಗಿ ಪಾವತಿಸಿದ ನೋಂದಣಿ ಶುಲ್ಕ 50 ರು. ಗಳಿಂದ 25,000 ವರೆಗೆ ಶುಲ್ಕ ಪಾವತಿಸಿದ ಎಲ್ಲ ರೈತರ ಪಂಪ್‌ಸೆಟ್‌ಗಳಿಗೆ ಸೌಕರ್ಯಗಳೊಂದಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ವಿದ್ಯುತ್ ಕಂಬದಿಂದ 500 ಮೀಟರ್ ಒಳಗಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ 500 ಮೀಟರ್‌ಗಿಂತ ಹೆಚ್ಚು ದೂರವಿರುವ ಪಂಪ್‌ಸೆಟ್‌ಗಳಿಗೆ ಕುಸುಮ್ ಬಿ ಯೋಜನೆಯಡಿ ಕೇಂದ್ರ ಸರಕಾರದ ಶೇ.30 ಮತ್ತು ರಾಜ್ಯ ಸರಕಾರದ ಶೇ.50ರಷ್ಟು ಸಬ್ಸಿಡಿಯೊಂದಿಗೆ ಸೋಲಾರ್ ವಿದ್ಯುತ್ ಕಲ್ಪಿಸಲಾಗುತ್ತದೆ. ಸೋಲಾರ್ ಪಂಪ್‌ನಿಂದ ಸಾವಿರ ಅಡಿವರೆಗೆ ಪಂಪ್ ಮಾಡುವ ಸಾಮಾರ್ಥ್ಯವಿರುತ್ತದೆ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ದುರಸ್ತಿಯಾದ ವಿದ್ಯುತ್ ಪರಿವರ್ತಕ ರೈತರಿಂದ ತರಿಸುವಂತಿಲ್ಲ
ರಾಜ್ಯದಲ್ಲಿ ರೈತರ ಕೃಷಿ ಪಂಪ್ ಸೆಟ್ ಗಳಿಗಾಗಿ ಬ್ಯಾಂಕ್ ಮತ್ತು ರೀಪೇರಿ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ. ವಿಫಲವಾದ ವಿದ್ಯುತ್ ಪರಿವರ್ತಕ ಗಳನ್ನು ರೀಪೇರಿ ಸೆಂಟರ್‌ಗಳಿಗೆ ತರುವಾಗ ಹೆಸ್ಕಾಂ ಗಳಿಂದಲೇ ವಾಹನದ ವ್ಯವಸ್ಥೆ ಮಾಡಿ ಟಿಸಿಯನ್ನು ರೈತರ ಜಮೀನಿನಿಂದ ರೀಪೇರಿ ಸೆಂಟರ್‌ಗಳಿಗೆ ತರಬೇಕು.
ಯಾವುದೇ ಕಾರಣಕ್ಕೂ ರೈತರೇ ವಾಹನ ತೆಗೆದುಕೊಂಡು ಹೋಗಿ ರೀಪೇರಿ ಕೇಂದ್ರಕ್ಕೆ ಟಿಸಿ ತರುವ ಪದ್ಧತಿಯನ್ನು ಅನುಸರಿಸಬಾರದು. ಇಂತಹ ಕ್ರಮಗಳು ಕಂಡಬಂದಲ್ಲಿ ಅಂತಹ ಸಿಬ್ಬಂದಿ ಮತ್ತು ಎಂಜಿನಿಯರ್‌ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.