ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ); ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಪವರ್ ಶೇರಿಂಗ್ ಚರ್ಚೆ ಇನ್ನು ಮುಂದುವರೆದಿದೆ. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಒಂದು ಪೋಸ್ಟ್ ತೀವ್ರ ಚರ್ಚೆಗೆ ಕಾರಣವಾಗಿದೆ.
ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ! pic.twitter.com/klregNRUtv
— DK Shivakumar (@DKShivakumar) November 27, 2025
ವರ್ಡ್ ಪವರ್ ಈಸ್ ವರ್ಲ್ಡ್ ಪವರ್ ಎಂದಿರುವ ಅವರು ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನೂ ಸೇರಿದಂತೆ ಯಾರೇ ಆಗಿರಲಿ, ಆಡಿದ ಮಾತಿನಂತೆ ನಡೆದುಕೊಳ್ಳಬೇಕು ಎಂದು ಅವರು ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ವರಿಷ್ಠರು, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಅಧಿಕಾರ ಬಿಟ್ಟುಕೊಡುತ್ತಿಲ್ಲ ಎಂಬುದು ಈ ಪೋಸ್ಟ್ ಅರ್ಥವೇ ಎಂದು ಬಿಜೆಪಿ, ಜೆಡಿಎಸ್ ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ..
ನಾನು ಯಾವುದೇ ಪೋಸ್ಟ್ ಮಾಡಿಲ್ಲ
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಮಾಡಿಲ್ಲ ಎಂದು ಹೇಳಿದ್ದಾರೆ.
ಹಾಗಾದ್ರೆ ಆ ಪೋಸ್ಟ್ ಫೇಕ್ ಪೋಸ್ಟಾ? ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು ನನಗೆ ಗೊತ್ತಿಲ್ಲ ಎಂದಿದ್ದಾರೆ. ನಾನು ಕೊಟ್ಟ ಮಾತಿನ ವಿಚಾರವಾಗಿ ಏನೂ ಪೋಸ್ಟ್ ಹಾಕಿಲ್ಲ. ನನಗೆ ಈ ವಿಚಾರವಾಗಿ ಏನು ಗೊತ್ತಿಲ್ಲ ಎಂದು ಹೇಳಿ ಸುಮ್ಮನಾಗಿದ್ದಾರೆ.
ಡಿ.ಕೆ.ಶಿವಕುಮಾರ್ ಬೆನ್ನಿಗೆ ನಿಂತ ಕಾವಿಪಡೆ!
ಕೊಟ್ಟ ಮಾತಿಗೆ ತಪ್ಪಿನಡೆದರೆ ಆ ಪರಮಾತ್ಮ ಮೆಚ್ಚಲ್ಲ ಉಳಿದ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಿ ಎಂದು ನಂಜಾವಧೂತ ಸ್ವಾಮೀಜಿಗಳು ಡಿ.ಕೆ.ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ 7.5 ವರ್ಷ ಸಿಎಂ ಅವಧಿಯನ್ನು ಪೂರೈಸಿದ್ದಾರೆ. ಅವರ ಮೇಲೆ ಯಾವುದೇ ಆಪಾದನೆ ಇಲ್ಲ. 5 ಗ್ಯಾರಂಟಿಗಳನ್ನು ಘೋಷಿಸಿ, ಅವುಗಳನ್ನು ಚಾಲ್ತಿಗೆ ತಂದು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
ಯಶ್ವಸಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ 2ನೇ ಬಾರಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸುವ ಮುನ್ನ ಈಗಾಗಲೇ ಒಂದು ಅವಧಿ ಪೂರೈಸಿದ್ದಾರೆ. ಹೀಗಾಗಿ ಎರಡನೇ ಅವಧಿಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ನೀಡುತ್ತಿದ್ದಾರೆ ಎಂದುಕೊಂಡಿದ್ದೇವು. ಹೈಕಮಾಂಡ್ ಮಾತು ಕೊಟ್ಟಿದ್ದರೆ, ಅದನ್ನು ಮರೆಯಬಾರದು. ಮಾತು ಕೊಟ್ಟ ಮೇಲೆ ತಪ್ಪಬಾರದು. ಹೀಗಾಗಿ ಉಳಿದ ಎರಡೂವರೆ ವರ್ಷ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿ ಎಂದು ಪಕ್ಷದ ಹಿರಿಯರಿಗೆ ಸಮುದಾಯದ ಪರವಾಗಿ ತಿಳಿಸಿದ್ದಾರೆ.
ಒಕ್ಕಲಿಗ ಸಮುದಾಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಕೂಡಾ ಡಿಕೆ ಶಿವಕುಮಾರ್ ಪರ ಮಾತನಾಡಿದ್ದಾರೆ.
ಪಕ್ಷಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಶ್ರಮಿಸಿದ್ದಾರೆ. ಜೀವ ಪಣಕ್ಕಿಟ್ಟು ಹೋರಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗದಿದ್ದರೆ ಬೇಸರವಾಗಲಿದೆ. ಪಕ್ಷ ಅಧಿಕಾರಕ್ಕೆ ತಂದ ಹೋರಾಟಗಾರ ಡಿ.ಕೆ. ಶಿವಕುಮಾರ್ ಅವರೇ ಮುಂದಿನ 2.5 ವರ್ಷ ಸಿಎಂ ಆಗಲಿದ್ದಾರೆ. ಅವರಿಗೆ ಸಿಎಂ ಸ್ಥಾನ ಅವಕಾಶ ಸಿಗುವ ಭರವಸೆ ಇತ್ತು. ಅವರನ್ನು ಮುಖ್ಯಮಂತ್ರಿ ಆಗಿ ಮಾಡಬೇಕು. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಹೇಳಿದ್ದಾರೆ.
ಒಕ್ಕಲಿಗ ಸಂಘದ ಬೆಂಬಲ
ನಾಯಕತ್ವ ಬದಲಾವಣೆ ಬಗ್ಗೆ ನೂತನವಾಗಿ ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಲ್ ಶ್ರೀನಿವಾಸ ಪ್ರತಿಕ್ರಿಯಿಸಿದ್ದು, ಡಿ.ಕೆ.ಶಿವಕುಮಾರ್ ಸಿಎಂ ಆಗಲು ಒಕ್ಕಲಿಗ ಸಂಘದಿಂದ ಸಂಪೂರ್ಣ ಬೆಂಬಲವಿದೆ, ಒಂದ್ ವೇಳೆ ಡಿಕೆ ಸಿಎಂ ಆಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನಮ್ಮ ಕೈಗೆ ಪೆನ್ನು ಪೇಪರ್ ಕೊಡಿ ಅಂತ ರಾಜ್ಯದ ಜನತೆಗೆ ಮನವಿ ಮಾಡಿದ್ರು, ಅದೇ ರೀತಿ ಜನ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿ.ಕೆ. ಶಿವಕುಮಾರ್ ಕಾರಣ ಎಂದರು.
ಹೈಕಮಾಂಡ್ ಕರೆದರೆ ನಾವು ಹೋಗುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್
“ಹೈಕಮಾಂಡ್ ನಾಯಕರು ದಿಲ್ಲಿಗೆ ಕರೆದರೆ ಹೋಗುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಅವರು ವಿಧಾನಸೌಧದ ಬಳಿ ಕೇಳಿದಾಗ ಮಾಧ್ಯಮಗಳ ಪ್ರಶ್ನೆಗೆ ಗುರುವಾರ ಪ್ರತಿಕ್ರಿಯಿಸಿದರು.
ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ದಿಲ್ಲಿಗೆ ಕರೆದು ಚರ್ಚೆ ಮಾಡುತ್ತೇವೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ, ಹೈಕಮಾಂಡ್ ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಕರೆದರೆ ನಾವು ಮಾತನಾಡಿಕೊಂಡು ದೆಹಲಿಗೆ ಹೋಗುತ್ತೇವೆ” ಎಂದರು.