ಗದಗ: ಕಾಲೇಜ್ ಹಾಸ್ಟೆಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಶವ ಪತ್ತೆಯಾಗಿರುವ (Student’s body found hanging in college hostel) ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ಬೀದರ ಜಿಲ್ಲೆ ಬಾಲ್ಕಿ ತಾಲೂಕಿನ ಧನ್ನೂರ ಎಸ್ ಗ್ರಾಮದ ಈಶ್ವರ ಗಾದಗೆ (21 ವರ್ಷ) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಮುಂಡರಗಿ ಪಟ್ಟಣದ SBS ಆಯುರ್ವೇದಿಕ್ ಮಡಿಕಲ್ ಕಾಲೇಜ್‌ನಲ್ಲಿ BAMS ಅಂತಿಮ ವರ್ಷದಲ್ಲಿ ಓದುತ್ತಿದ್ದನು ಮತ್ತು ಎಲ್ಲಾ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದನು ಎನ್ನಲಾಗಿದೆ.
ಈ ಘಟನೆ ಸಂಬಂಧ ಕಾಲೇಜ್ ಆಡಳಿತ ಮಂಡಳಿ, ಸಿಬ್ಬಂಧಿ ವಿರುದ್ಧ ಪೋಷಕರು ಆರೋಪ ಮಾಡಿದ್ದು, ಕೊಲೆ ಮಾಡಿ ನೇಣು ಹಾಕಿದ್ದಾರೆ ಅಂತ ಆರೋಪ ಮಾಡಿದ್ದಾರೆ ಎಂದಿದ್ದಾರೆ.
ಆರು ತಿಂಗಳ ಹಿಂದೆ ಕಾಲೇಜ್ ಉಪನ್ಯಾಸಕ ಕಿರುಕುಳ ತಾಳದೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದನು. ಇದೀಗ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ವಿದ್ಯಾರ್ಥಿ ಕಾಲಿನ ಬೆರಳಿನ ಉಗುರು ಕೂಡ ಕಿತ್ತು ಹಿಂಸೆ ಕೊಡಲಾಗಿದೆ.
ಅಷ್ಟೇ ಅಲ್ಲದೆ ಕತ್ತು, ದೇಹದ ಭಾಗದಲ್ಲಿ ರಕ್ತದ ಗಾಯಗಳಾಗಿವೆ. ಕಾಲೇಜ್‌ನವರೇ ಕೊಲೆ ಮಾಡಿ ಆತ್ಮಹತ್ಯೆಯ ಕಥೆ ಸೃಷ್ಟಿ ಮಾಡಿದ್ದಾರೆ. ಜೊತೆಗೆ ಪೊಲೀಸ್ ಇಲಾಖೆ, ಕುಟುಂಬಕ್ಕೆ ಮಾಹಿತಿ ನೀಡದೇ ಆಸ್ಪತ್ರೆಗೆ ಶವ ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ ಡೆತ್ ನೋಟ್ ಪತ್ತೆಯಾಗಿದ್ದು, “ನನ್ನ ಸಾವಿಗೆ ಯಾರೂ ಕಾರಣ ಅಲ್ಲ.. ನಾನೆ ಕಾರಣ. ಸಾರಿ ಮಮ್ಮಾ ಸಾರಿ ಪಪ್ಪಾ” ಎಂದು ಬರೆಯಲಾಗಿದೆ.
ಆದ್ರೆ ಕುಟುಂಬಸ್ಥರು ಇದು ನಮ್ಮಮಗ ಬರೆದ ಹ್ಯಾಂಡ್‌ರೈಟಿಂಗ್ ಅಲ್ವ, ಕಾಲೇಜ್ ನವರು ಸೃಷ್ಟಿ ಮಾಡಿರುವ ಡೆತ್ ನೋಟ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಕಾಲೇಜಿನಲ್ಲಿ ಈ ಹಿಂದೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅದನ್ನು ಮುಚ್ಚಿ ಹಾಕಿದ್ದಾರೆ.
ನಮ್ಮ ಮಗನಿಗೂ ಕಿರಕುಳ ನೀಡಿದ್ದರು. ಇದು ಅಂತಿಮ ವರ್ಷ ಇರೋದ್ರಿಂದ ಈಶ್ವರ ಗಾದಗೆ ಸಮಾಧಾನ ಮಾಡಿದ್ದೇವು. ಆದ್ರೆ, ಕಾಲೇಜನವರು ಕೊಂದು ಬಿಟ್ರು ಅಂತ ತಂದೆ ಗೋಳಾಡಿದ್ದಾರೆ. ಇನ್ನೂ ಘಟನೆ ಸಂಬಂಧ ಸ್ಥಳಕ್ಕೆ ಮುಂಡರಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.