
ಚಿಕ್ಕಬಳ್ಳಾಪುರ: ಇವನು ಅಂತಿಂಥ ಕಳ್ಳನಲ್ಲ (Thief), ಪ್ರತಿ ದಿನವೂ ಒಂದಲ್ಲ ಒಂದು ಮನೆಗೆ ಕನ್ನ ಹಾಕೋದು ಇವನ ಕಾಯಕ, ಅವನ ಮೇಲೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಇರೋದು 97 ಮನೆಗಳ್ಳತನ ಪ್ರಕರಣಗಳು, ಹೀಗೆ ಕನ್ನ ಹಾಕಿದ ಹಣದಲ್ಲಿ ಕುಡಿದು ತೂರಾಡಿ ಮೋಜು ಮಸ್ತಿ ಮಾಡೋದೆ ಅವನಿಗೆ ಚಟ.
ಇನ್ನೂ ಸ್ನೇಹಿತ ನೊಡೋಕೆ ಅಂತ ಕರ್ನಾಟಕಕ್ಕೆ ಬಂದವನು ಕರ್ನಾಟಕದಲ್ಲೂ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಇಂತಹ ಖತರ್ನಾಕ್ ಕಳ್ಳನನ್ನ ಕರ್ನಾಟಕ ಪೊಲೀಸರು ಎಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ..
ಯಾರು ಈ ಕಳ್ಳ..?
ಹೌದು 97 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಈಗ ಕರ್ನಾಟಕ ಪೊಲೀಸರ ಅತಿಥಿಯಾಗಿ ಜೈಲು ಸೇರಿರೋ ಈ ಖತರ್ನಾಕ್ ಮನೆಗಳ್ಳನ ಹೆಸರು ರಾಹುಲ್ ಕುಮಾರ್ ಶರ್ಮಾ ಅಂತ, ಮೂಲತಃ ರಾಜಸ್ತಾನದವನಾದರೂ ತೆಲಂಗಾಣದಲ್ಲಿ ವಾಸವಾಗಿದ್ದಾನೆ.
15 ವರ್ಷಕ್ಕೆ ಮನೆಯಿಂದ ಹೊರ ಬಂದವನು ಮಾಡ್ತಿರೋ ವೃತ್ತಿಯೇ ಮನೆಗಳ್ಳತನ, ಸರಿಸುಮಾರು 38 ವರ್ಷದ ಈ ರಾಹುಲ್ ಇದುವರೆಗೂ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ 97 ಕಡೆ ಮನೆಗಳ್ಳತನ ಮಾಡಿ ಖತರ್ನಾಕ್ ಕಳ್ಳನಾಗಿದ್ದಾನೆ.
ಇನ್ನೂ ಇದೇ ರಾಹುಲ್ ಕುಮಾರ್ ಶರ್ಮಾ ತನ್ನ ಸ್ನೇಹಿತ ಸೈಯದ್ ಷರೀಫ್ ಜೊತೆ ಸೇರಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣಕ್ಕೆ ಮತ್ತೋರ್ವ ಸ್ನೇಹಿತ ಅಲ್ಲಾ ಬಕಾಷ್ ನ ನೋಡೋಕೆ ಅಂತ ಬಂದಿದ್ದರು.. ಇನ್ನೂ ತೆಲಂಗಾಣದಿಂದ ಸ್ನೇಹಿತರು ಬಂದ್ರು ಅಂತ ಅಲ್ಲಾ ಬಕಾಷ್ ತಮ್ಮನಾಯಕನಹಳ್ಳಿ ಬಳಿಯ ಬಾರ್ ವೊಂದರಲ್ಲಿ ಪಾರ್ಟಿ ಸಹ ಕೊಡಿಸಿದ್ದ.
ಕುಡಿದು ಇನ್ನೇನು ತೆಲಂಗಾಣಕ್ಕೆ ವಾಪಾಸ್ ಹೋಗಬೇಕು ಅಂತ ಬಂದವರು, ಚಿಕ್ಕಬಳ್ಳಾಪುರದ ಅಣಕನೂರು ಬಳಿಯ ರಸ್ತೆ ಬದಿ ಬೇಕರಿವೊಂದರಲ್ಲಿ ಟೀ ಕುಡಿಯೋಕೆ ಅಂತ ಗಾಡಿ ನಿಲ್ಲಿಸಿದ್ರಂತೆ, ಈ ವೇಳೆ ಖತರ್ನಾಕ್ ಕಳ್ಳ ರಾಹುಲ್ ಕುಮಾರ್ ಶರ್ಮಾ ಮೂತ್ರ ವಿಸರ್ಜನೆಗೆ ಅಂತ ಹೋದವನು ರಸ್ತೆ ಬದಿಯಲ್ಲೇ ಬೀಗ ಹಾಕಿದ್ದ ಮನೆಯೊಂದು ಕಣ್ಣಿಗೆ ಕಂಡಿದ್ದೇ ತಡ, ಮನೆಯ ಬೀಗವನ್ನ ಕ್ಷಣ ಮಾತ್ರದಲ್ಲೇ ಒಡೆದು ಹಾಕಿ ಮನೆಯಲ್ಲಿದ್ದ ಚಿನ್ನಾಭರಣ ನಗದು ದೋಚಿದ್ದಾನೆ.
ಅಂದಹಾಗೆ ಅಣಕನೂರು ಗ್ರಾಮದ ಮುನಿಯಪ್ಪ ಮುನಿನರಸಮ್ಮ ದಂಪತಿ ಮನೆಗೆ ಬೀಗ ಹಾಕಿ ಹೊಲ ಕಟಾವಿಗೆ ಅಂತ ಜಮೀನಿನತ್ತ ತೆರಳಿದ್ರು, ಹೀಗಾಗಿ ಮನೆಯಲ್ಲಿ ಯಾರೂ ಇಲ್ಲ ಮನೆಗೆ ಬೀಗ ಹಾಕಿದೆ ಅಂತ ಖತರ್ನಾಕ್ ರಾಹುಲ್ ಕುಮಾರ್ ಶರ್ಮಾ ಹಿಂದೆ ಮುಂದೆ ಯೋಚನೆ ಮಾಡದೆ ಮನೆಯ ಬೀಗ ಹೊಡೆದು, ಬಿರುವಿನಲ್ಲಿದ್ದ 2 ಲಕ್ಷ 50 ಸಾವಿರ ನಗದು, 35 ಗ್ರಾಂ ತೂಕದ ಚಿನ್ನಾಭರಣಗಳನ್ನ ಕದ್ದಿದ್ದ.
ಇನ್ನು ಮಗಳ ಮದುವೆಗೆ ಅಂತ ಮಾಡಿಸಿದ್ದ ಚಿನ್ನಾಭರಣ ಕಳ್ಳನ ಪಾಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಫಿಂಗರ್ ಪ್ರಿಂಟ್ ಗಳ ಆಧಾರದ ಮೇಲೆ ಕಿಲಾಡಿ ಕಳ್ಳ ರಾಹುಲ್ ಕುಮಾರ್ ಶರ್ಮಾ, ಹಾಗೂ ಸೈಯದ್ ಷರೀಫ್ ಹಾಗೂ ಅಲ್ಲಾ ಬಕಾಷ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಇನ್ನೂ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ 97 ಕಡೆ ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿರೋ ಈ ಖತರ್ನಾಕ್ ರಾಹುಲ್ ಕುಮಾರ್ ಶರ್ಮಾ ಇದೇ ಮೊದಲನೇ ಬಾರಿಗೆ ಕರ್ನಾಟಕದಲ್ಲಿ ಕಳ್ಳತನ ಮಾಡಿದ್ದ. ಆದ್ರೆ ಕರ್ನಾಟಕ ಪೊಲೀಸರು ಮೊದಲ ಪ್ರಕರಣದಲ್ಲೇ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತನಿಂದ 20 ಗ್ರಾಂ ಚಿನ್ನಾಭರಣ ಹಾಗೂ 25 ಸಾವಿರ ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ ಬೈಕ್ ಸಹ ಸೀಝ್ ಮಾಡಿದ್ದಾರೆ.