
ಬೆಂಗಳೂರು: ರಾಜ್ಯದಾದ್ಯಂತ ಭಾನುವಾರ ಪಲ್ಸ್ ಪೋಲಿಯೋ ಲಸಿಕಾ (Polio Vaccination) ಕಾರ್ಯಕ್ರಮಕ್ಕೆ ಹಮ್ಮಿಕೊಳ್ಳಲಾಗಿದ್ದು, 0-5 ವರ್ಷದೊಳಗಿನ 62.40 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ 10.45ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಕ್ಕಳಿಗೆ ಸಾಂಕೇತಿಕವಾಗಿ ಪೋಲಿಯೋ ಹನಿಗಳನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ರಾಷ್ಟ್ರೀಯ ಲಸಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 11,34,588 ಮಕ್ಕಳು ಸೇರಿ ರಾಜ್ಯಾದ್ಯಂತ 62,40,114 ಮಕ್ಕಳಿಗೆ ಲಸಿಕೆ ಹಾಕಲಾಗುವ ಗುರಿ ಹೊಂದಿದ್ದು, ಅದಕ್ಕಾಗಿ 33,258 ಬೂತ್‌ಗಳನ್ನು ರಚಿಸಿದ್ದು, 1,030 ಸಂಚಾರಿ ತಂಡಗಳು, 2,096 ಟ್ರಾನ್ಸಿಸ್ಟ್ ತಂಡಗಳು, 1,13,115 ಲಸಿಕಾ ಕಾರ್ಯಕರ್ತರು, 7,322 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.
ಬೂತ್‌ಗಳಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ನಡೆದ ಬಳಿಕ ಡಿ.22ರಿಂದ ಮೂರು ದಿನ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಲಿದೆ.
ವಲಸೆ, ಕೊಳಗೇರಿ ನಿವಾಸಿಗಳ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ ಮಾರ್ಚ್‌ನಲ್ಲಿ ಶೇ.102 ಗುರಿ ಸಾಧಿಸಲಾಗಿತ್ತು.
ಈ ಬಾರಿಯೂ ನೂರರಷ್ಟು ಗುರಿ ಸಾಧಿಸುವ ನಿಟ್ಟಿನಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಇಲಾಖೆ ಕ್ರಮ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.