ಬೆಂಗಳೂರು: ಹೊಸ ವರ್ಷದ (New Year) ಸ್ವಾಗತಕ್ಕೆ ಜನತೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಪ್ರವಾಸಿಗರ ಸುರಕ್ಷತೆ ಮತ್ತು ಅಹಿತಕರ ಘಟನೆಗಳ ತಡೆಗಟ್ಟುವಿಕೆಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ.
ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಡಿಸೆಂಬರ್ 31 ರಂದು ಮಧ್ಯಾಹ್ನ 2 ಗಂಟೆಯಿಂದ ಜನವರಿ 1ರ ಬೆಳಗ್ಗೆ 10 ಗಂಟೆಯವರೆಗೂ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ.
ನಂದಿ ಬೆಟ್ಟದ ಮೇಲಾಗದ ಹೋಟೆಲ್ ಗಳಲ್ಲಿ ಮುಂಗಡವಾಗಿ ರೂಮ್ ಬುಕ್ ಮಾಡಿರುವ ಪ್ರವಾಸಿಗರಿಗೆ ವಿನಾಯತಿ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಸೇರಿದಂತೆ ಪ್ರಮುಖ 22 ಪ್ರವಾಸಿ ತಾಣಗಳಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಆನ್ ಲೈನ್ ಮುಖಾಂತರ ನಿಷೇಧಿಸುವ ಸ್ಥಳಗಳ ಮಾರ್ಗದಲ್ಲಿ ಇರುವ ಹೋಂ ಸ್ಟೇ ರೆಸಾರ್ಟ್ ಗಳನ್ನು ಕಾಯ್ದಿರಿಸಿದ ಪ್ರವಾಸಿಗರಿಗೆ ಸಂಬಂಧಪಟ್ಟ ಹೋಂ ಸ್ಟೇ ಮತ್ತು ರೆಸಾರ್ಟ್ ಗೆ ಹೋಗಲು ಹೊರತುಪಡಿಸಿ ಇತರೆ ಪ್ರವಾಸಿಗರನ್ನು ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಜಾವರಿನ್ ಚೆಕ್ ಪೋಸ್ಟ್ ನಿಂದ ಮೇಲ್ಬಾಗಕ್ಕೆ ಹೋಗುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ತಾತ್ಕಾಲಿಕ ವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ನಿರ್ಬಂಧಿತ ಪ್ರದೇಶಗಳು
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಝರಿ ಫಾಲ್ ಹೊನ್ನಮ್ಮನಹಳ ಗಾಳಿಕೆರೆ ಹಾಗೂ ಹಿರೇಕೊಳಲೆ ಕೆರೆ. ಕಾಮೇನಹಳ್ಳಿ ಗ್ರಾಮದಲ್ಲಿರುವ ಡೈಮಂಡ್ ಫಾಲ್ಸ್, ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯ ಎತ್ತಿನಭುಜ, ದೇವರಮನೆ, ರಾಣಿಝರಿ, ಬಲ್ಲಾಳರಾಯನ ದುರ್ಗ, ಬಂಡಾಜೆ ಫಾಲ್ಸ್ ಕುಡಿಗೆ ಫಾಲ್ಸ್.
ಕಳಸ ತಾಲ್ಲೂಕು ವ್ಯಾಪ್ತಿಯ ಕ್ಯಾತನಮಕ್ಕಿ ರುದ್ರಪಾದ, ತೂಗು ಸೇತುವೆ ಮತ್ತು ಅಬ್ಬುಗುಡಿಗೆ ಫಾಲ್ಸ್, ಕಡೂರು ತಾಲ್ಲೂಕು ವ್ಯಾಪ್ತಿಯ ಆಯ್ಯನಕೆರೆ, ಮದಗದಕೆರೆ.
ತರೀಕೆರೆ ತಾಲ್ಲೂಕು ವ್ಯಾಪ್ತಿಯ ಕೆಮ್ಮಣ್ಣುಗುಂಡಿ, ಕಲ್ಲತ್ತಿರಿ. ಹೆಬ್ಬೆ ಫಾಲ್ಸ್ ಪ್ರವೇಶಕ್ಕೆ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿಷೇಧಿಸಿ ಆದೇಶಿಸಲಾಗಿದೆ.