ದೊಡ್ಡಬಳ್ಳಾಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆ (KPTCL) ಹಾಗೂ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿಯ ಸಹಯೋಗದೊಂದಿಗೆ, ತಾಲ್ಲೂಕಿನ ದರ್ಗಾಜೋಗಿಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ವಿದ್ಯುತ್ ಅಪಘಾತ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೆಪಿಟಿಸಿಎಲ್ (KPTCL) ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಮುಟ್ಟಬಾರದು, ವಿದ್ಯುತ್ ಮಾರ್ಗಗಳ ಕಾರಿಡಾರ್‌ನಲ್ಲಿ ಮನೆಗಳನ್ನು ನಿರ್ಮಾಣ ಮಾಡಬಾರದು, ವಿದ್ಯುತ್ ಗೋಪುರಗಳಿಗೆ ಬ್ಯಾನರ್ ಕಟ್ಟುವುದಾಗಲಿ, ಯಾವುದೇ ತರಹದ ಕೇಬಲ್‌ಗಳನ್ನು ಕಟ್ಟುವುದಾಗಲಿ, ಜಾನುವಾರಗಳನ್ನು ಕಟ್ಟುವುದಾಗಲಿ, ಬಟ್ಟೆ ಒಣಗಿಸಲು ಹಾಕುವುದಾಗಲಿ, ವಿದ್ಯುತ್ ಮಾರ್ಗಗಳ ಹತ್ತಿರದಲ್ಲಿ ಗಾಳಿಪಟವನ್ನು ಹಾರಿಸುವುದಾಗಲಿ, ವಿದ್ಯುತ್ ಗೋಪುರಗಳ ಸುತ್ತಲೂ ಮಣ್ಣನ್ನು ತೆಗೆಯುವುದಾಗಲಿ ಮಾಡಬಾರದೆಂದು ಸಲಹೆ ನೀಡಿದರು.
ಅಲ್ಲದೆ ಗೃಹೊಪಯೋಗಿ ವಸ್ತುಗಳಿಗೆ ಕಡ್ಡಾಯವಾಗಿ ಅರ್ಥಿಂಗ್ ಮಾಡಿಸಬೇಕೆಂದು, ವಿದ್ಯುತ್ ಸಂಬಂಧಿತ ಕೆಲಸಗಳನ್ನು ಸಂಬಂಧಪಟ್ಟವರಿಂದ ಮಾತ್ರ ಮಾಡಿಸಬೇಕೆಂದರು. ಹಾಗೂ ಮಣ್ಣನ್ನು ಅಗೆಯುವಾಗ ಭೂಗತ ಕೇಬಲ್‌ಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಕಾಮಗಾರಿಗಳನ್ನು ಮಾಡಬೇಕೆಂದರು.
ಇದೇ ವೇಳೆ ವಿದ್ಯುತ್ ಮಾರ್ಗಗಳ ಹತ್ತಿರದಲ್ಲಿ ಬೆಳೆದಿರುವ ಮರಗಳನ್ನು ಕತ್ತರಿಸುವ ಮುನ್ನ ಜಾಗರೂಕತೆಯಿಂದ ಇರಬೇಕೆಂದು ಹಾಗೂ ವಿದ್ಯುತ್ ಮಾರ್ಗಗಳ ಅಡಿಯಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡಬಾರದೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶಶಿಕಲಾ ಪಿಡಿಒ ಶಿವರಾಜ್, ಗ್ರಾಮ ಪಂಚಾಯತಿಯ ಸದಸ್ಯರುಗಳು, ಕೆಪಿಟಿಸಿಎಲ್ ದೊಡ್ಡಬಳ್ಳಾಪುರ ಟಿ.ಎಲ್.ಎಮ್ ಉಪವಿಭಾಗದ ಎಇಇ ಉಷಾ. ಎಂ.ಎಸ್., ಟಿಎಕ್ಯೂ ವಿಭಾಗದ ಎಇಇ ಅಂಭಿಕಾ, 220 ಕೆ,ವಿ ಸ್ವೀಕರಣಾ ಕೇಂದ್ರದ ಎಇಇ ಅಜೀತ್ ಕುಮಾರ್, ಚಿಕ್ಕಬಳ್ಳಾಪುರ ನೋಡಲ್ ಕೇಂದ್ರದ ಎಇಇ ಲಕ್ಷ್ಮೀನಾರಾಯಣ ಪಿ., ಎಇ ಗಳಾದ ನಾಗಮಣಿ, ನಟರಾಜು, ನಾಗರಾಜು, ಪ್ರಕಾಶ್ ಹಾಗೂ ದೊಡ್ಡಬಳ್ಳಾಪುರ ಟಿ.ಎಲ್.ಎಮ್ ಶಾಖೆಯ ಕಿರಿಯ ಇಂಜಿನಿಯರ್ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿಗಳು ಇದ್ದರು.