ದೊಡ್ಡಬಳ್ಳಾಪುರ: ತಾಲ್ಲೂಕಿನ ಅರೆಹಳ್ಳಿಗುಡ್ಡದಹಳ್ಳಿ ಗ್ರಾಮದ ಸರ್ವೆ ನಂ.57ರ ಜಮೀನು ಮಂಜೂರಾತಿಯಲ್ಲಿ ನಡೆದಿದ್ದ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಮಾಡುವ ಮೂಲಕ ಮತ್ತೆ ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಆದರೆ ಜಮೀನು ಮಂಜೂರಾತಿಗೆ ಅಗತ್ಯ ನಕಲಿ ದಾಖಲೆಗಳನ್ನು ಸೃಷ್ಠಿಸಿರುವ ತಾಲ್ಲೂಕು ಕಚೇರಿಯಲ್ಲಿನ ಅಧಿಕಾರಿಗಳ (Officials) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಆಗ್ರಹಿಸಿದರು.
ಅವರು ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ನಕಲಿ ದಾಖಲೆಗಳ ಸೃಷ್ಠಿಯ ಬಗ್ಗೆ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದಾರೆ. ಇದುವರೆಗೂ ದಾಖಲೆಗಳನ್ನು ಸೃಷ್ಠಿಸಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಾಗಿಲ್ಲ.
ಇದೇ ರೀತಿಯಲ್ಲಿ ನಗರದ ಗಂಗಾಧರಪುರ ಸರ್ವೇ ನಂಬರ್ 17ರಲ್ಲಿ ಸೋಮೇಶ್ವರ ಕುಂಟೆ ಜಮೀನು ಸಹ ಒತ್ತುವರಿಯಾಗಿದೆ. ಪಹಣಿಯಲ್ಲಿನ ವಿಸ್ತೀರ್ಣ ಕಾಲಂನಲ್ಲಿ ಈ ಕುಂಟೆಯ ವಿಸ್ತೀರ್ಣವೇ ತೊರೆಸದಂತೆ ಮಾಡಲಾಗಿದೆ. ಆದರೆ ಹಳೇಯ ದಾಖಲೆಗಳಲ್ಲಿ ಎಲ್ಲವು ಕಾನೂನು ಬದ್ದವಾಗಿದೆ.
ಈ ಹಿನ್ನೆಲೆಯಲ್ಲಿ ಒತ್ತುವರಿಯನ್ನು ತೆರವು ಮಾಡುವಂತೆ ತಾಲ್ಲೂಕು ಆಡಳಿತದಿಂದ ಜಿಲ್ಲಾ ಆಡಳಿತದವರೆಗೂ ಅಗತ್ಯ ದಾಖಲೆಗಳ ಸಮೇತ ದೂರುಗಳನ್ನು ನೀಡಿದ್ದರು ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಒತ್ತುವರಿ ತೆರುವುಗೊಳಿಸದಿದ್ದರೆ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವ ಆಚರಣೆ ದಿನದಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಗೆ ಲಿಖಿತವಾಗಿ ಮನವಿ ನೀಡಲಾಗಿದೆ ಎಂದರು.
ತಾಲ್ಲೂಕು ಕಚೇರಿ ಸಮೀಪದಲ್ಲೇ ರೋಜಿಪುರ ಸರ್ವೇ ನಂ.93ರಲ್ಲಿನ ಆಯಕಟ್ಟಿನ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದ್ದರು ಸಹ ತಾಲ್ಲೂಕು ಆಡಳಿತ ಕಣ್ಣುಮುಚ್ಚಿಕುಳಿತಿದೆ.
ರೋಜಿಪುರದ ಕೈಲಾಸ ಮಠ ಸ್ಮಶಾನದ ಸ್ಥಳದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದರ ವಿರುದ್ಧ ದೂರು ನೀಡಿದ್ದರು ನಗರಸಭೆ ಆಡಳಿತ ಕ್ರಮ ಕೈಗೊಳ್ಳದೆ ನ್ಯಾಯಾಲದ ನೆಪ ಹೇಳಿಕೊಂಡು ಕಾಲಾಹರಣ ಮಾಡುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್,ರಾಜ್ಯ ಸಂಘಟನಾ ಕಾರ್ಯದರ್ಶಿ ಅರವಿಂದ್, ರಾಜ್ಯ ಮುಖಂಡ ನರೇಂದ್ರ,ಯುವ ಘಟಕದ ಅಧ್ಯಕ್ಷ ರಂಜಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ, ಜಿಲ್ಲಾ ಅಧ್ಯಕ್ಷ ಪುನೀತ್ ಕುಮಾರ್,ತಾಲ್ಲೂಕು ಅಧ್ಯಕ್ಷ ವಿನಯ್ ಆರಾಧ್ಯ, ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್, ಕಾರ್ಯದರ್ಶಿ ಉದಯಕುಮಾರ, ಸಂಘಟನ ಕಾರ್ಯದರ್ಶಿ ಶಿವು ಇದ್ದರು.