ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಸೂರತ್ನಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿರುವ ಸೀರೆಗಳ ಹಾವಳಿಯಿಂದ ನೇಕಾರಿಕೆ ಉದ್ಯಮದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಸರಿಪಡಿಸುವಂತೆ ಆಗ್ರಹಿಸಿ ಜ.5 ರಂದು ವಿವಿಧ ನೇಕಾರ ಸಂಘಟನೆಗಳ (weavers’ organizations) ವತಿಯಿಂದ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ವಯಂ ಪ್ರೇರಿತ ಬಂದ್ಗೆ (Doddaballapura Bandh) ಕರೆ ನೀಡಲಾಗಿದೆ.
ಈ ಕುರಿತಂತೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ನಗರದಲ್ಲಿ ಸುಮಾರು 25 ಸಾವಿರ ವಿದ್ಯುತ್ ಮಗ್ಗಗಳು ಇವೆ. ಇವುಗಳನ್ನು ಅವಲಂಭಿಸಿ ಸಾವಿರಾರು ಕುಟುಂಬಗಳು ಹಾಗೂ ಹಲವಾರು ಉದ್ಯಮಗಳು ಅವಲಂಭಿಸಿವೆ. ಆದರೆ ಈಗ ಸೂರತ್ನಿಂದ ಕಡಿಮೆ ಬೆಲೆಗೆ ಸೀರೆಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿರುವುದರಿಂದ ಇಲ್ಲಿ ನೇಯಲಾಗುತ್ತಿರುವ ಸೀರೆಗಳನ್ನು ಖರೀದಿಸುವವರೆ ಇಲ್ಲದಂತಾಗಿದೆ.
ಎಂಪಿ, ಎಂಎಲ್‌ಎ ಮಾತನಾಡಿಲ್ಲ..!
ಈ ಬಿಕ್ಕಟಿನ ಕುರಿತು ಸಂಸತ್ ಸದಸ್ಯರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಜವಳಿ ಸಚಿವರು ಹಾಗೂ ಮುಖ್ಯಮಂತ್ರಿಗಳವರೆಗೂ ಮನವಿಗಳನ್ನು ಸಲ್ಲಿಸಲಾಗಿದೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿದ್ಯುತ್ ಮಗ್ಗಗಳ ನೇಕಾರರ ಸಂಕಷ್ಟದ ಬಗ್ಗೆ ಸ್ಥಳೀಯ ಶಾಸಕರಿಂದ ಮೊದಲುಗೊಂಡು ಯಾರೂ ಸಹ ಮಾತನಾಡಿಲ್ಲ.
ಈ ಹಿನ್ನೆಲೆಯಲ್ಲಿ ವಿದ್ಯುತ್ ಮಗ್ಗಗಳ ನೇಕಾರಿಕೆ ಉಳಿವಿಗಾಗಿ ಆಗ್ರಹಿ ಜ.5 ರಂದು ದೊಡ್ಡಬಳ್ಳಾಪುರ ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ. ಈಗಾಗಲೇ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆ, ವಿವಿಧ ರಾಜಕೀಯ ಪಕ್ಷಗಳು, ವರ್ತಕರು, ಕನ್ನಡಪರ ಸಂಘಟನೆ ಸೇರಿದಂತೆ ಹಲವಾರು ಮುಖಂಡರೊಂದಿಗೆ ಸಭೆಗಳನ್ನು ನಡೆಸಲಾಗಿದ್ದು ಎಲ್ಲರು ಬಂದ್ಗೆ ಬೆಂಬಲ ಸೂಚಿಸಿದ್ದಾರೆ.
ಇದಲ್ಲದೆ ನೇಕಾರಿಕೆ ಉದ್ಯಮ ಇರುವ ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿನ ನೇಕಾರರು ಸಹ ಜ.5 ರಂದು ನಮ್ಮ ಬಂದ್ ಬೆಂಬಲಿಸಿ ಹಾಗೂ ನೇಕಾರಿಕೆ ಬಿಕ್ಕಟ್ಟಿನ ಪರಿಹಾರಕ್ಕೆ ರಾಜ್ಯ ಸರ್ಕಾರ ಮುಂದಾಗುವಂತೆ ಆಗ್ರಹಿಸಿ ಅಲ್ಲಿನ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಲಿದ್ದಾರೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನೇಕಾರರ ಸಂಬಂಧಿಸಿದ ಅನೇಕ ಸಂಘಟನೆಗಳ ಮುಖಂಡರು ಹಾಜರಿದ್ದರು.
ದೊಡ್ಡಬಳ್ಳಾಪುರ ಬಂದ್ ಮಾಡಿದರೆ ಮೋದಿ ಸರ್ಕಾರ ಮಣಿಯುವುದೇ..?
ದೊಡ್ಡಬಳ್ಳಾಪುರ ನೇಕಾರಿಗೆ ಪ್ರಸಿದ್ಧಿ ಪಡೆದಿದೆ. ಇತ್ತೀಚೆಗೆ ಹೊರ ರಾಜ್ಯದ ಕಾರ್ಮಿಕರ ಹಾವಳಿ ಬಳಿಕ ರೇಪಿಯಾರ್ ಮಗ್ಗದ ಕುರಿತು ಚರ್ಚೆ, ಪ್ರತಿಭಟನೆ ತೀವ್ರವಾಗಿದೆ.
ಇನ್ನೂ ಪ್ರಮುಖವಾಗಿ ನೇಕಾರಿಕೆ ಬಗ್ಗೆ ಸರಳವಾಗಿ ಹೇಳುವುದಾದರೆ, ಕೈಮಗ್ಗ, ವಿದ್ಯುತ್ ಮಗ್ಗ, ರೇಪಿಯರ್ ಮಗ್ಗ ಚರ್ಚಿತ ವಿಚಾರವಾಗಿದೆ.
ಇದಕ್ಕೆ ಪೂರಕ ಅಂಶ ನೆನಪಿಸುವುದಾದರೆ ಕೈಮಗ್ಗ ಮೀಸಲಾತಿ ಅಧಿನಿಯಮ 1985 ಅಡಿಯಲ್ಲಿ 11 ನಮೂನೆಯ ಬಟ್ಟೆಗಳನ್ನು ವಿದ್ಯುತ್ ಮಗ್ಗಗಳಲ್ಲಿ ಸೀರೆಗಳನ್ನು ನೇಯುವಂತಿಲ್ಲ. ಅದೇ ರೀತಿ ವಿದ್ಯುತ್ ಮಗ್ಗಗಳಲ್ಲಿ ನೇಯಲಾಗುವ ಸೀರೆಗಳನ್ನು ರೇಪಿಯಾರ್ ಮಗ್ಗಗಳಲ್ಲಿ ನೇಯದಂತೆ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂಬ ಒತ್ತಾಯ ಇಲ್ಲಿ ನೇಕಾರರದ್ದಾಗಿದೆ.
ಇನ್ನೂ ಕರ್ನಾಟಕದ ದೊಡ್ಡಬಳ್ಳಾಪುರ, ಬೆಳಗಾವಿ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಕೂಡ ನೇಕಾರರು ವಿದ್ಯುತ್ ಮಗ್ಗಗಳನ್ನು ಅವಲಂಭಿಸಿ ಜೀವನ ನಡೆಸುತ್ತಿದ್ದಾರೆ.
ಈ ಕಾರಣ ರೇಪಿಯಾರ್ ಮಗ್ಗಗಳನ್ನು ಗುಡಿ ಕೈಗಾರಿಕೆ ಯೋಜನೆಯಿಂದ ಹೊರಗಿಡುವುದು, ರೇಪಿಯರ್ ಮಗ್ಗಗಳ ಸ್ಥಾಪನೆ ಮಾಡುವುದನ್ನು ತಡೆಯಬೇಕೆಂಬುದು ನೇಕಾರರ ಆಗ್ರಹ.
ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದಿನ ಜಾಗತೀಕರಣ ಹಾಗೂ ಮುಕ್ತ ವ್ಯಾಪಾರದ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನೇಕಾರರ ಸಮಸ್ಯೆಗೆ ಎಷ್ಟು ಮನ್ನಣೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.