ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ (Gavisiddeshwara Maharathotsava) ನಿಮಿತ್ತ ಸೋಮವಾರ ಸಂಜೆ ಗೋಧೂಳಿ ಸಮಯಕ್ಕೆ ಮಹಾರಥೋತ್ಸವವು ಯಶಸ್ವಿಯಾಗಿ ಜರುಗಿತು.
ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಶಂಕರ್ ರಥೋತ್ಸವಕ್ಕೆ ಚಾಲನೆ ನೀಡಿದರು.
ನಗರದ ಗವಿಮಠದ ಆವರಣದಲ್ಲಿ ವೈಜ್ಞಾನಿಕವಾಗಿ ಸಜ್ಜುಗೊಳಿಸಿದ್ದ ರಥಕ್ಕೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಾಥ್ ನೀಡಿದರು.
ಬಳಿಕ ಸಾಗಿದ ರಥ ರಾಜ ಗಾಂಭೀರ್ಯದಿಂದ ಪಾದಗಟ್ಟಿ ತಲುಪಿ, ಮರಳಿ ಮೂಲಸ್ಥಾನ ತಲುಪುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಗವಿಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ಬಾಜಾ ಭಜಂತ್ರಿಯೊಂದಿಗೆ ಗವಿಮಠದ ಗರ್ಭಗುಡಿಯ ಮೇಲ್ಬಾಗದ ಗದ್ದುಗೆಯಿಂದ ಮೆರವಣಿಗೆಯ ಮೂಲಕ ತರಲಾಯಿತು.
ಬಳಿಕ ನಂದಿಗೋಲು, ಕಂಸಾಳೆ ವಾದ್ಯ ಸೇರಿ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ರಥ ಸಾಗುತ್ತಿದ್ದಂತೆಯೇ ಭಕ್ತರ ‘ಗವಿಸಿದ್ದೇಶ್ವರ ಮಹಾರಾಜಕೀ ಜೈ’ ಉದ್ಯೋಷ ಮುಗಿಲು ಮುಟ್ಟಿತು.
ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಲಕ್ಷಾಂತರ ಆಗಮಿಸಿದ್ದರು.
ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್, ವಿ.ಸೋಮಣ್ಣ, ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಶಾಸಕ ಗಾಲಿ ಜನಾರ್ದನ ರೆಡ್ಡಿ, ಗವಿಶ್ರೀ ಕಾರ್ಯ ಮತ್ತು ಗವಿಮಠದ ಪರಂಪರೆ ಹಾಡಿ ಹೊಗಳಿದರು.
ಕಾಗಿನೆಲೆಯ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಂಸದ ಕೆ.ರಾಜಶೇಖರ ಹಿಟ್ನಾಳ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಬಸನಗೌಡ ತುರ್ವಿಹಾಳ, ಹಂಪನಗೌಡ ಬಾದರ್ಲಿ, ಮಹೇಶ ಟೆಂಗಿನಕಾಯಿ, ಎಂಎಲ್ಸಿಗಳಾದ ಹೇಮಲತಾ ನಾಯಕ, ಶಶೀಲ್ ನಮೋಶಿ, ಮಾಜಿ ಸಂಸದರಾದ ಸಂಗಣ್ಣ ಕರಡಿ, ಶಿವರಾಮೇಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಕೆ.ಶರಣಪ್ಪ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಭಾಗವಹಿಸಿದ್ದರು.