ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕು ಪತ್ರಕರ್ತರಿಗೆ (Journalists) ನಿವೇಶನ ನೀಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ದೊಡ್ಡಬಳ್ಳಾಪುರ ತಾಲೂಕು ಘಟಕ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ದೊಡ್ಡಬಳ್ಳಾಪುರ ತಾಲೂಕು ಘಟಕದ ಅಧ್ಯಕ್ಷ ಜನಪರ ಮಂಜುನಾಥ್, ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ನೀಡಿರುವ ಆಶ್ವಾಸನೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ವಿಧಾನ ಸಭೆ ಕ್ಷೇತ್ರಗಳ ಪ್ರತಿ ಕ್ಷೇತ್ರಕ್ಕೆ 2500 (ಎರಡೂವರೆ ಸಾವಿರ) ನಿವೇಶನ ನೀಡುವ ತಮ್ಮ ಪ್ರಯತ್ನಕ್ಕೆ ನಮ್ಮ ಸಂಘಟನೆಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಅದರಂತೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕರಿಗೆ ನೀಡಲು ಉದ್ದೇಶಿಸಿರುವ ನಿವೇಶನಗಳ ಪೈಕಿ ನಮ್ಮ ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ನಿವೇಶನಗಳನ್ನು ನೀಡಬೇಕೆಂದು ಮನವಿ ಮಾಡಲಾಗಿದೆ ಎಂದರು.
ಮನವಿ ಪತ್ರ ಸ್ವೀಕರಿಸಿದ ಸಚಿವ ಮುನಿಯಪ್ಪ ಸಕಾರಾತ್ಮಕವಾಗಿ ಸ್ಪಂದಿಸಿ, ಕರೆ ಮಾಡಿ ಮಾತಾಡುವುದಾಗಿ ಹೇಳಿದರೆಂದು ತಿಳಿದು ಬಂದಿದೆ.
ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯ ಕಾರ್ಯದರ್ಶಿ ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಆನಂದ್ ಕುಮಾರ್, ದೊಡ್ಡಬಳ್ಳಾಪುರ ತಾಲೂಕು ಘಟಕದ ಉಪಾಧ್ಯಕ್ಷ ಚೌಡರಾಜ್, ನಿರ್ದೇಶಕರಾದ ವೇಣುಗೋಪಾಲ್ ಮತ್ತಿತರರಿದ್ದರು.