ದೊಡ್ಡಬಳ್ಳಾಪುರ: ಮಕರ ಸಂಕ್ರಾಂತಿ ಹಬ್ಬವನ್ನು ನಗರದ ಜೆಡಿಎಸ್ (JDS) ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡರ (B. MuneGowda) ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಎತ್ತಿನಗಾಡಿಯನ್ನು ಸಿಂಗರಿಸಿ, ಗೋ ಪೂಜೆ ನೆರವೇರಿಸಿ, ಕಬ್ಬಿನ ಜೊಲ್ಲೆಗಳನ್ನು ಹಿಡಿದು ಮುನೇಗೌಡರೊಂದಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಕ್ರಾಂತಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿ ಬಿ.ಮುನೇಗೌಡ ಅವರು, ಬೆಳೆದ ಬೆಳೆಗಳ ರಾಶಿ ಹಾಗೂ ರಾಸುಗಳ ಪೂಜೆಸುವ ಮಹತ್ವದ ದಿನವೇ ಸಂಕ್ರಾಂತಿ ಆಚರಣೆಯಾಗಿದೆ. ಜೆಡಿಎಸ್ ಪಕ್ಷಕ್ಕೂ ರೈತರಿಗೆ ಅಭಿನಾಭಾವ ಸಂಬಂಧವಿದೆ. ಆ ಕಾರಣವೇ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರನ್ನು ಮಣ್ಣಿನ ಮಗ ಎಂದು ರಾಷ್ಟ್ರ ಮಟ್ಟದಲ್ಲಿ ಕರೆಯಲಾಗಿದೆ.

ಅಲ್ಲದೆ ಪಂಜಾಬ್‌ನ ರೈತರು, ಅವರ ಕೃಷಿ ಪರ ಕಾಳಜಿಗೆ ಗೌರವ ಸೂಚಕವಾಗಿ ‘ದೇವೇಗೌಡ’ ಎಂಬ ಹೆಸರಿನ ಅಕ್ಕಿ ತಳಿಯೊಂದನ್ನು ನಾಮಕರಣ ಮಾಡಿದ್ದಾರೆ ಇದು ಜೆಡಿಎಸ್ ವರಿಷ್ಠರಿಗೆ ರೈತರ ಪರ ಕಾಳಜಿಗೆ ಸಾಕ್ಷಿಯಾಗಿದೆ.
ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ಕಡಿಮೆ
ದೇವೇಗೌಡರ ಹಾದಿಯಲ್ಲಿಯೇ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಸಾಗಿದ್ದು, ಅವರಿಗೆ ದೊರತೆ ಅಲ್ಪ ಕಾಲದ ಮುಖ್ಯಮಂತ್ರಿ ಸ್ಥಾನದಲ್ಲಿ ಸುಮಾರು 25 ಸಾವಿರ ಕೋಟಿ ಸಾಲ ಮನ್ನ ಮಾಡಿ ರೈತರ ನೆರವಿಗೆ ಬಂದವರು. ಅಂದಿನಿಂದ ಮಾಧ್ಯಮಗಳಲ್ಲಿ ರೈತರ ಆತ್ಮಹತ್ಯೆಯ ವರದಿಗಳು ಕಡಿಮೆಯಾಗಿದೆ ಎಂದರು.
ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ
ಇನ್ನೂ ಇತ್ತೀಚಿಗಿನ ದೊಡ್ಡಬಳ್ಳಾಪುರ ಜೆಡಿಎಸ್ ಮುಖಂಡರ ಬಣ ಬಡಿದಾಟದ ಕುರಿತಂತೆ ಕಾಂಗ್ರೆಸ್ ಲೇವಡಿ ಮಾಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಬಿ.ಮುನೇಗೌಡ ಅವರು, ಮನೆ ಎಂದ ಮೇಲೆ ಅಲ್ಪಸ್ವಲ್ಪ ಬೇಸರ ಇರುತ್ತೆ.. ಆದರೆ ಎಲ್ಲರೂ ಒಂದಾಗಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಬದ್ದರಾಗಿದ್ದೇವೆ. ಆದರೆ ಕಾಂಗ್ರೆಸ್ ನವರ ಕುರ್ಚಿ ಕದನ ನೋಡಿದರೆ, 2028 ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಅವರಿಗೆ ಇಲ್ಲವಾಗಿದ್ದು, ಕುಮಾರಸ್ವಾಮಿ ಅವರಿಗೆ ಈ ಮೂಲಕ ಆಹ್ವಾನ ನೀಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ವಕ್ತಾರ ಕುಂಟನಹಳ್ಳಿ ಮಂಜುನಾಥ್, ನಗರಸಭೆ ಸದಸ್ಯರಾದ ತ.ನ.ಪ್ರಭುದೇವ್, ವಡ್ಡರಹಳ್ಳಿ ರವಿಕುಮಾರ್, ಮುಖಂಡರಾದ ರಾಜಘಟ್ಟ ಹರೀಶ್, ತಳವಾರ ನಾಗರಾಜ್, ಜಗನ್ನಾಥ ಚಾರ್, ಸತೀಶ್, ಭಾಗ್ಯಮ್ಮ, ಶಶಿಕಲಾ, ರಾಮಕೃಷ್ಣ, ಸಂತೋಷ್, ಭಾನು, ಕೆಂಪೇಗೌಡ, ಆಲಹಳ್ಳಿ ಅಜಯ್, ವಿನಯ್, ಸುರೇಶ ಮತ್ತಿತರರಿದ್ದರು.