ಕೆ.ಎಂ.ಸಂತೋಷ್, ಆರೂಢಿ, (ದೊಡ್ಡಬಳ್ಳಾಪುರ): ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು (Sankranti) ತಾಲೂಕಿನಾದ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.
ಹಬ್ಬಕ್ಕೆ ಎಳ್ಳು ಬೆಲ್ಲ, ಗೆಣಸು, ಅವರೆ ಕಾಯಿ, ಕಬ್ಬು ಮೊಲದಾದ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದ ಜನತೆ ಎಳ್ಳು ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂಕ್ರಾಂತಿ ಶುಭಾಶಯಗಳನ್ನು ಕೋರಿದರು.
ಮನೆಗಳ ಮುಂದೆ ಸಂಕ್ರಾಂತಿಯ ವಿಶೇಷ ಶುಭಾಶಯಗಳನ್ನು ಕೋರುವ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರವು ಹಬ್ಬಕ್ಕೆ ಮೆರುಗು ನೀಡಿದ್ದವು.
ಕಬ್ಬು, ಅವರೇ ಕಾಯಿ, ಕಡಲೇಕಾಯಿಗಳನ್ನು ಗೋವುಗಳಿಗೆ ನೇವೇದ್ಯ ಮಾಡಿ ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ತಾಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ನಗರದ ಅಯ್ಯಪ್ಪಸ್ವಾಮಿ ದೇವಾಲಯ, ನೆಲದಾಂಜನೇಯಸ್ವಾಮಿ, ಕಾಳಮ್ಮದೇವಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಬಸವ ಭವನದ ಬಳಿಯ ಸೋಮೇಶ್ವರ ದೇವಾಲಯದಲ್ಲಿ ಮೀನಾಕ್ಷೀ ಸಮೇತ ಸ್ವಯಂಭುವೇಶ್ವರ ಸ್ವಾಮಿಗೆ ಬೆಳಿಗ್ಗೆ ಅಭಿಷೇಕ ಅಲಂಕಾರ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.
ತಾಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರ ಗ್ರಾಮದಲ್ಲಿನ ಶ್ರೀ ಕಾಶಿ ವಿಶ್ವನಾಥೇಶ್ವರ ಮಹಾಸ್ವಾಮಿಯ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಅಲಂಕಾರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.

ದೊಡ್ಡಬಳ್ಳಾಪುರದಲ್ಲಿ ಸಂಕ್ರಾಂತಿಯ ಅಂಗವಾಗಿ ಮಹಿಳೆಯರು ಗೋವುಗಳಿಗೆ ನೇವೇದ್ಯವಿರಿಸಿ ಪೂಜೆ ಸಲ್ಲಿಸಿದರು.
ಇನ್ನೂ ದೊಡ್ಡಬಳ್ಳಾಪುರ ಗ್ರಾಮಾಂತರ ಪ್ರದೇಶದಲ್ಲಿ ಸಂಕ್ರಾಂತಿಯಂದು ಪ್ರತಿ ವರ್ಷದಂತೆ ಈ ಬಾರಿಯೂ ಕಾಟಿಮರಾಯನ ಹಬ್ಬದ ಆಚರಣೆ ನಡೆದಿದೆ.

ರೈತರು ತಮ್ಮ ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿಸುವ, ಅಚರಣೆಗಳು ಎಲ್ಲೆಡೆ ಕಂಡು ಬಂದವು.

ರೈತನ ದುಡಿಮೆಯಲ್ಲಿ ಭಾಗಿಯಾಗುವ ರಾಸುಗಳಿಗೆ ಸಂಕ್ರಾಂತಿಯಂದು ವಿಶೇಷ ಆತಿಥ್ಯ. ರಾಸುಗಳಿಗೆ ಮೈ ತೊಳೆದು, ಕೊಂಬುಗಳಿಗೆ ಬಣ್ಣಗಳನ್ನು ಬಳಿದು ಅಲಂಕಾರ ಮಾಡಲಾಗಿತ್ತು.
ಕಾಡನೂರು ಗ್ರಾಮದಲ್ಲಿ ಕಾಟಿಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.
ವಿವಿಧ ಗ್ರಾಮಗಳಲ್ಲಿ ರಾಸುಗಳಿಗೆ ವಿಶೇಷ ಅಲಂಕಾರ ಮಾಡಿ ಕಿಚ್ಚು ಹಾಯಿಸುವ ಆಚರಣೆ ಮಾಡಲಾಯಿತು.

ದೊಡ್ಡಬಳ್ಳಾಪುರ ತಾಲೂಕಿನ ಕುಂಟನಹಳ್ಳಿ, ದೊಡ್ಡತುಮಕೂರು, ಚಿಕ್ಕತುಮಕೂರು, ಮಜರಾಹೊಸಹಳ್ಳಿ, ಮೆಳೇಕೋಟೆ, ಹೆಗ್ಗಡಿಹಳ್ಳಿ ಮೊದಲಾದ ಗ್ರಾಮಗಳಲ್ಲಿ ರಾಸುಗಳಿಗೆ ವಿಶೇಷ ಅಲಂಕಾರ ಮಾಡಿ, ಕಿಚ್ಚು ಹಾಯಿಸುವ ಆಚರಣೆ ಮಾಡಲಾಯಿತು.
