ಬೆಂಗಳೂರು: ಜಗಳ ಮಾಡುತ್ತಿದ್ದ ಪತಿಯ ಮೇಲಿನ ಕೋಪಕ್ಕೆ ಬೆಂಕಿ ಹಚ್ಚಿಕೊಂಡು ತಾಯಿ ಮಗಳು ಮೃತಪಟ್ಟಿರುವ ದಾರುಣ ಘಟನೆ (Suicide) ಸಂಜಯನಗರದ ಕೃಷ್ಣಪ್ಪ ಲೇಔಟ್‌ನಲ್ಲಿ ನಡೆದಿದೆ.

ಮೃತರನ್ನು ಕೃಷ್ಣಪ್ಪ ಲೇಔಟ್‌ನ ನಿವಾಸಿ ಸೀತಾ (29 ವರ್ಷ) ಹಾಗೂ ಮಗಳು ಸೃಷ್ಟಿ (4 ವರ್ಷ) ಎಂದು ಗುರುತಿಸಲಾಗಿದೆ.
ನೇಪಾಳ ಮೂಲದ ಗೋವಿಂದ್ ಬಹದ್ದೂರ್ ಹಾಗೂ ಸೀತಾ ದಂಪತಿ ಇಲ್ಲಿನ ಸಂಜಯ್ ನಗರದ ಮನೆಯೊಂದರಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು. ಕೆಲಸ ಮಾಡುತ್ತಿದ್ದ ಮನೆಯ ಪಕ್ಕದಲ್ಲಿಯೇ ದಂಪತಿಗೆ ವಾಸಿಸಲು ಸಣ್ಣ ಮನೆ ನೀಡಲಾಗಿತ್ತು.
ಆಗಾಗ ನೇಪಾಳಕ್ಕೆ ಹೋಗುತ್ತಿದ್ದ ಗೋವಿಂದ್ ಬಹದ್ದೂರ್ ಐದಾರು ತಿಂಗಳಾದ ವಾಪಸ್ ಬರುತ್ತಿರಲಿಲ್ಲವಂತೆ. ಇದೇ ವಿಚಾರವಾಗಿ ಪತಿ, ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ.
ಇದರಿಂದ ಬೇಸತ್ತು ಹೋಗಿದ್ದ ಪತ್ನಿ ಸೀತಾ, ಗುರುವಾರ ಸಂಜೆ ಸಹ ಪತಿಯೊಂದಿಗೆ ಫೋನ್ ಕರೆಯಲ್ಲಿ ಜಗಳವಾಡಿಕೊಂಡಿದ್ದಳಂತೆ. ಬಳಿಕ ತಾನು ಹಾಗೂ ಪುತ್ರಿಯ ಮೇಲೆ ಪೆಟ್ರೊಲ್ ಸುರಿದುಕೊಂಡು ಬೆಂಕಿಯಿಟ್ಟುಕೊಂಡಿದ್ದರು.
ಘಟನೆಯ ಸೀತಾ ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡಿದ್ದ ಪುತ್ರಿ ಸೃಷ್ಟಿಯನ್ನ ಅಕ್ಕಪಕ್ಕದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಪುತ್ರಿ ಸಹ ಶುಕ್ರವಾರ ಬೆಳಗ್ಗೆ ಅಸುನೀಗಿದ್ದಾಳೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಸಂಜಯನಗರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.