ದೊಡ್ಡಬಳ್ಳಾಪುರ: ಮುಂದೆ ತಿರುವು ಪಡೆಯುತ್ತಿದ್ದ ಕಂಟೈನರ್ ಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ (Accident) ಕಂಟೈನರ್ ಮುಗುಚಿ ಬಿದ್ದು, ಚಾಲಕರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಮೇಷ್ಟ್ರು ಮನೆ ಕ್ರಾಸ್ ಬಳಿ ಸೋಮವಾರ ನಡೆದಿದೆ.
ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ ದಾಬಸ್ ಪೇಟೆ -ಹೊಸಕೋಟೆ ನಡುವಿನ ಮೇಷ್ಟ್ರು ಮನೆ ಕ್ರಾಸ್ ಬಳಿ ಟಿಪ್ಪರ್ ಒಂದು ಕಂಟೈನರ್ ಗೆ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಕಂಟೈನರ್ ಹೆದ್ದಾರಿಯಲ್ಲಿ ಮುಗುಚಿ ಬಿದ್ದಿದೆ. ಎರಡು ವಾಹನಗಳು ದಾಬಸ್ ಪೇಟೆಯಿಂದ ಹೊಸಕೋಟೆಗೆ ಹಿಂದೆ ಮುಂದೆ ಬರುವ ವೇಳೆ ಮುಂದೆ ಸಾಗುತ್ತಿದ್ದ ಕಂಟೈನರ್ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಪ್ಪರ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಎರಡೂ ವಾಹನಗಳ ಚಾಲಕರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.