ದೊಡ್ಡಬಳ್ಳಾಪುರ (Doddaballapura): ರಂಗ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಈ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಲಾವಿದರಿಗೆ ಹೆಚ್ಚಿನ ನೆರವು ನೀಡುವ ಅಗತ್ಯವಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ (T. Venkataramanaiah) ಹೇಳಿದರು.

ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ, ತಾಲ್ಲೂಕು ಕಲಾವಿದರ ಸಂಘ ಸಹಯೋಗದೊಂದಿಗೆ ನಗರದ ತೇರಿನ ಬೀದಿಯಲ್ಲಿ ನಡೆದ ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಾಟಕ ಪ್ರದರ್ಶನಕ್ಕೆ ಅರಳು ಮಲ್ಲಿಗೆ ಶಾಲೆಯ ಆಟದ ಮೈದಾನ ನೀಡದಿರುವ ಸಂಗತಿ ವಿವಾದಕ್ಕೀಡಾಗಿದ್ದು, ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಲಾ ಪ್ರದರ್ಶನಕ್ಕೆ ರಂಗ ಮಂದಿರದ ಅಗತ್ಯತೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಕಲೆಯ ಉತ್ತೇಜನಕ್ಕೆ ಸರ್ಕಾರ ಹಾಗೂ ಸಮುದಾಯ ಸ್ಪಂಧಿಸಿದಾಗ ಕಲಾವಿದರು ಅಸ್ತಿತ್ವ ಉಳಿಸಿಕೊಳ್ಳಲಿದ್ದಾರೆ ಎಂದರು.
ಜಿಲ್ಲಾ ರಂಗಭೂಮಿ ಕಲಾವಿದ ಸಂಘದ ಗೌ.ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ಸರ್ಕಾರ ಮಾಸಾಶನ ನೀಡುತ್ತಿರುವುದು ಸ್ವಾಗತಾರ್ಹ. ಆದರೆ 2.5 ಸಾವಿರ ರೂ ಮಾಸಾಶನ ಕಲಾವಿದರು ಜೀವನ ನಡೆಸಲು ಸಾಲುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ 5 ಸಾವಿರ ರೂ ಮಾಸಾಶನ ಹೆಚ್ಚಿಸಬೇಕು. ಕಲಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕಲಾವಿದರು ವಿಭಿನ್ನ ಪ್ರದರ್ಶನಗಳನ್ನು ನೀಡುವ ಮೂಲಕ ರಂಗಭೂಮಿಯ ಜೀವಂತಿಕೆಗೆ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಕೆ.ಟಿ.ಮಾದೇಶ್, ವೀರಭದ್ರಪ್ಪ, ಗಂಗಮ್ಮ, ತೇರು ನಿರ್ಮಾಣ ಮಾಡುವ ಸುಬ್ಬಣ್ಣ, ಜಯಣ್ಣ, ನಾಣ್ಯ ಸಂಗ್ರಹಕಾರ ಎಂ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ, ಸದಸ್ಯರಾದ ಪ್ರಭಾ ನಾಗರಾಜ್, ಎಚ್.ಎಸ್.ಶಿವಶಂಕರ್, ಚಂದ್ರ ಮೋಹನ್, ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ವಿಶ್ವನಾಥ ರೆಡ್ಡಿ, ಕರವೇ (ಪ್ರವಿಣ್ ಶೆಟ್ಟಿಬಣ) ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಡಿ.ಪಿ.ಆಂಜನೇಯ, ತಾಲೂಕು ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಚೌಡರಾಜ್ ಮುಖಂಡರಾದ ಬಿ.ಜಿ.ಹೇಮಂತ ರಾಜ್, ಪರಮೇಶ್, ಶ್ರೀಧರ್ ಗೌಡ, ರಾಜ್ ಗೋಪಾಲ್ ಕಂಟನ ಕುಂಟೆ, ವೆಂಕಟ ರಾಜು, ನಾಗೇಶ್, ನಾಗೇಂದ್ರ, ಸಂಚಾಲಕರಾದ ಪ್ರಕಾಶ್ ರಾವ್, ಡಿ.ವೆಂಕಟೇಶ್, ,ಗಂಗರಾಜು ಶಿರವಾರ, ನಂದ ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ನಾಟಕೋತ್ಸವದ ಅಂಗವಾಗಿ ಪದ್ಮಪ್ರಿಯಾ ಕಲಾ ಟ್ರಸ್ಟ್ ಬೀಡಿಕೆರೆ ವತಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಹಾಗೂ ರಾತ್ರಿ ತಬಲ ಕಾಂತರಾಜು ಅಭಿಮಾನ ಬಳಗ, ತುಮಕೂರು ಇವರಿಂದ ದುರ್ಯೋಧನನ ಗರ್ವಭಂಗ ಪೌರಾಣಿಕ ನಾಟಕ ಪ್ರದರ್ಶನಗಳು ನಡೆದವು.