ದೊಡ್ಡಬಳ್ಳಾಪುರ: ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ ಮತ್ತು ಪಶುಪಾಲನಾ ಇಲಾಖೆ ಜಂಟಿ ಆಶ್ರಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರ ತಳಿ ಪ್ರದರ್ಶನಕ್ಕೆ ಬಮೂಲ್ (Bamul) ಅಧ್ಯಕ್ಷ ಡಿ.ಕೆ. ಸುರೇಶ್ (D.K. Suresh) ಚಾಲನೆ ನೀಡಿದರು.

ಹಾಲು ಕರೆಯುವ ಸ್ಪರ್ಧೆಯಲ್ಲಿ 36 ಹಸುಗಳು ಭಾಗವಹಿಸಿದ್ದು, 45 ಲೀಟರ್ ಹಾಲು ಕರೆದ ಹಸುವಿಗೆ ಮೊದಲ ಬಹುಮಾನ, 39 ಲೀಟರ್ ಹಾಲು ಕರೆದ ಹಸುವಿಗೆ ದ್ವಿತೀಯ ಬಹುಮಾನ ಹಾಗೂ 30 ಲೀಟರ್ ಹಾಲು ಕರೆದ ಹಸುವಿಗೆ ತೃತೀಯ ಬಹುಮಾನ ನೀಡಲಾಯಿತು. ಮಾಲೀಕರನ್ನು ಸನ್ಮಾನಿಸಲಾಯಿತು.

ಮಿಶ್ರ ತಳಿ ಪ್ರದರ್ಶನದಲ್ಲಿ ಅನೇಕ ಕರುಗಳು ಭಾಗವಹಿಸಿದ್ದು, 9 ಕರುಗಳಿಗೆ ಬಹುಮಾನ ನೀಡಲಾಯಿತು. ಅಲ್ಲದೆ ಭಾಗವಹಿಸಿದ್ದ ಎಲ್ಲಾ ಕರುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ರೈತರನ್ನು ಹೈನುಗಾರಿಕೆ ಕಡೆಗೆ ಆಕರ್ಷಿಸುವ ಸಲುವಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆ ಮೂಲಕ ಪೂರೈಕೆ ಕಡಿಮೆಯಾಗಿರುವ ಹಾಲಿನ ಉತ್ಪಾದನೆ ಹೆಚ್ಚಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ ಕಾರ್ಯಕ್ರಮ ಕೈಗೊಳ್ಳಲಾಗುವುದು.
ಹಾಲಿನ ಪ್ರೋತ್ಸಾಹ ಧನವನ್ನು 5 ರೂನಿಂದ 7 ರೂಗೆ ಹೆಚ್ಚಿಸುವ ಕುರಿತು ಚಿಂತನೆ ನಡೆದಿದ್ದು,ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮಹತ್ವದ ಬದಲಾವಣೆಗಳನ್ನು ತರಲು ಬಮೂಲ್ ಕಾರ್ಯೋನ್ಮುಖವಾಗಿದೆ. ರೈತರು ಯಾವುದೇ ಕಾರಣಕ್ಕೂ ಹೈನುಗಾರಿಕೆಯಿಂದ ಹಿಂದೆ ಸರಿಯಬಾರದು ಎಂದು ಮನವಿ ಮಾಡಿದರು.
ಇಡೀ ದೇಶದಲ್ಲಿ ಹಾಲಿಗೆ 5 ರೂ ಪ್ರೋತ್ಸಾಹ ಧನ ನೀಡುತ್ತಿರುವ ರಾಜ್ಯ ನಮ್ಮದಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿಗೆ ಹೆಚ್ಚಿನ ದರ ನೀಡಲಾಗುತ್ತಿದೆ. ಆದರೆ ಹೈನುಗಾರಿಕೆಗೆ ನಷ್ಟದ ಕಾರಣ ಒಡ್ಡಿ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ.
ಹೈನುಗಾರಿಕೆಯಿಂದ ಸ್ವಾವಲಂಭಿ ಬದುಕು ನಡೆಸಲು ವಿಪುಲ ಅವಕಾಶಗಳಿವೆ. ಇದು ಸ್ವಯಂ ಉದ್ಯೋಗಕ್ಕೆ ದಾರಿಯಾಗಲಿದ್ದು, ನಿರುದ್ಯೋಗ ಸಮಸ್ಯೆ ನಿವಾರಿಸಲು ನೆರವಾಗುತ್ತದೆ. ಆದರೆ ಬೇಸಿಗೆ ಹಾಗೂ ಇತರ ಕಾರಣಗಳಿಂದಾಗಿ ಬಮೂಲ್ನಲ್ಲಿ ಹಾಲು ಉತ್ಪಾದನೆ 18 ಲಕ್ಷದಿಂದ 15 ಲಕ್ಷ ಲೀಟರ್ ಗಳಿಗೆ ಇಳಿದಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1.80 ಲಕ್ಷ ಲೀ. ನಿಂದ 1.05 ಲಕ್ಷ ಲೀಗೆ ಇಳಿದಿದೆ.
ಇಂದು ನಂದಿನಿ ಬ್ರಾಂಡ್ ದಿನೇ ದಿನೇ ಪ್ರಖ್ಯಾತಿ ಹೊಂದುತ್ತಿದ್ದು, ಅದಕ್ಕೆ ರೈತರ ಪರಿಶ್ರಮ ಕಾರಣವಾಗಿದೆ. ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಸಂಸ್ಥೆಯ ಏಳಿಗೆಗೆ ಶ್ರಮಿಸಿದರೆ ಅದರ ಲಾಭ ಸಹ ರೈತರ ಪಾಲಾಗುತ್ತಿದೆ.
ಹಾಲಿನ ಉತ್ಪಾದನೆ ಹೆಚ್ಚಿಸಲು ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಹೊಸದಾಗಿ ಹಸುಗಳನ್ನು ಖರೀದಿಸಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಲ್ಲಿನ 25 ಜನ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ 1.60 ಲಕ್ಷ ದಿಂದ 15 ಲಕ್ಷದವರೆಗೂ ಸಾಲ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಹಸುಗಳು ಹೆಣ್ಣು ಕರು ಹಾಕಿದಾಗ ರೈತರಿಗೆ ಹೆಚ್ಚಿನ ಲಾಭವಿದ್ದು, ಈ ದಿಸೆಯಲ್ಲಿ ಕಡ್ಡಾಯವಾಗಿ ಹೆಣ್ಣು ಕರುಹಾಕುವ ಕುರಿತಾಗಿ, ತಳಿಗಳನ್ನು ಸಜ್ಜುಗೊಳಿಸಲು ಸರ್ವೆ ಮಾಡಲಾಗುತ್ತಿದೆ. ರೈತರಿಗೆ ಹಸಿ ಮೇವು ಒದಗಿಸುವುದು, 1 ಲಕ್ಷ ಕೌ ಮ್ಯಾಟ್ಗಳನ್ನು ಹಾಗು ಹಾಲು ಕರೆಯುವ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ . ನಾಟಿ ಹಸು ಹಾಲಿಗೆ ಲೀಟರ್ಗೆ 90 ರೂ ನೀಡಲಾಗುತ್ತಿದ್ದು, ನಾಟಿ ಹಸು ಹಾಲಿನ ಸಂಗ್ರಹಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ರೈತರಿಗೆ 5 ದಿನ ಗಿಣ್ಣಿನ ಹಾಲು ಪಡೆಯಲು ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ನಾಡಿನ ರೈತರ ಹೆಮ್ಮೆಯ ನಂದಿನ ಉತ್ಪನ್ನಗಳನ್ನು ಬಳಸುವಂತೆ ಜನತೆಯನ್ನು ಮನವಿ ಮಾಡಿದ ಅವರು, ಇತರ ಹಾಲಿನ ಘಟಕಗಳಿಗಿಂದ ಬಮೂಲ್ ರೈತರಿಗೆ ಹೆಚ್ಚಿನ ದರ ನೀಡುತ್ತಿದೆ ಎಂದರು.
ಪ್ರಶ್ನೆಗೆ ಉತ್ತರ
ಇನ್ನೂ ಸುದ್ದಿಗಾರರ ರಾಜಕೀಯ ವಿಚಾರಗಳ ಪ್ರಶ್ನೆಗೆ ತೀಕ್ಷ್ಣ ಉತ್ತರ ನೀಡಿದ ಡಿ.ಕೆ. ಸುರೇಶ್ ಅವರು, ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಬಜೆಟ್ ನಿಂದ ರಾಜ್ಯಕ್ಕೆ ಆದ ಲಾಭ ಏನು ಎಂಬುದರ ಬಗ್ಗೆ ಮೊದಲು ಉತ್ತರ ನೀಡಬೇಕಿದೆ. ಕೇಂದ್ರ ಸರ್ಕಾರವೇ ನೇಮಿಸಿರುವ ದರ ನಿಯಂತ್ರಣ ಮಂಡಳಿ ಮೆಟ್ರೋ ದರ ಏರಿಕೆ ಮಾಡುತ್ತದೆ. ಅದನ್ನು ರಾಜಕೀಯಕ್ಕೆ ಬಳಸಿಕೊಂಡು ಮಾಧ್ಯಮಗಳ ಮುಂದೆ ಮಾತಾಡುತ್ತಾರೆ.
ನಾವು ರಾಜಕೀಯ ಮಾಡಲು ಹೋಗುವುದಿಲ್ಲ. ಕೇಂದ್ರ ಸರ್ಕಾರ ರಾಜ್ಯದ ಜನರಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ದನಿ ಎತ್ತಬೇಕಿದೆ. ವಿವಿಧ ನೀರಾವರಿ ಯೋಜನೆಗೆ ಅನುದಾನ ನೀಡುತ್ತಿಲ್ಲ ಏಕೆ..? ಎಂದು ಪ್ರಶ್ನಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಮೂಲ್ ನಿರ್ದೇಶಕ ಬಿ.ಸಿ.ಆನಂದಕುಮಾರ್, ಬಮೂಲ್ನ ಹಾಳಿನ ಪಾಲಲಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಪಾತ್ರವೂ ಮಹತ್ವದ್ದಾಗಿದೆ. ತಾಲೂಕಿನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಹಾಲಿನ ಟೆಟ್ರಾಪ್ಯಾಕ್ ಸೇರಿದಂತೆ ನಂದಿನಿಯ ಇತರೆ ಉತ್ಪನ್ನಗಳನ್ನು ತಯಾರಿಸಲು 15 ಎಕರೆ ಜಮೀನು ಖರೀದಿಸಲಾಗಿದೆ. ಬಮೂಲ್ ವತಿಯಿಂದ ಉತ್ಪನ್ನ ತಯಾರಿಕ ಘಟಕ ಸ್ಥಾಪನೆಗೆ ಅನುದಾನ ನೀಡಬೇಕು. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗಳಾಗಿ ಅದನ್ನು ಉದ್ಘಾಟಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿಯೂ ಹಾಲಿನ ಉತ್ಪನ್ನಗಳ ಘಟಕ ಸ್ಥಾಪಿಸಲು ಜಮೀನುಗಳನ್ನು ಮೀಸಲಿರಿಸಲಾಗಿದೆ. ಈ ಕುರಿತು ಬಮೂಲ್ ಕಾರ್ಯಕಾರಿ ಸಭೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ರೈತರು ಹಸುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಯಾವುದೇ ಆತಂಕವಿಲ್ಲದೇ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದ ಕೆ. ಸುಧಾಕರ್, ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರದ ವಕೀಲ ಹಾಗೂ ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ ಸದಸ್ಯ ದೀಪು ಸಿ.ಆರ್., ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಿಶ್ವಾಸ್ ಗೌಡ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.