ದೊಡ್ಡಬಳ್ಳಾಪುರ: ಕರ್ತವ್ಯದ ವೇಳೆ ನೆಲಮಂಗಲದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಹುತಾತ್ಮರಾದ ಪಿಎಸ್‌ಐ ಜಗದೀಶ್ ಅವರ 44ನೇ ಹುಟ್ಟು ಹಬ್ಬವನ್ನು ಹುತಾತ್ಮ ಪಿಎಸ್ಐ ಜಗದೀಶ್ (PSI Jagadish) ಫೌಂಡೇಶನ್ ವತಿಯಿಂದ ಆಚರಿಸಲಾಯಿತು.
ಬೆಂಗಳೂರು- ಹಿಂದೂಪುರ ರಾಜ್ಯ ಹೆದ್ದಾರಿ ಡಿ.ಕ್ರಾಸ್ ಸಮೀಪದ ಪಿಎಸ್‌ಐ ಜಗದೀಶ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಪ್ರದೀಪ್, ಮಂಜುಳ, ಗೋವಿಂದ ರಾಜು, ಮಂಜುನಾಥ್, ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಾಧಿಕ್ ಫಾಷಾ ಮಾತನಾಡಿ, ಕಾನೂನು ಇರುವುದು ಜನರ ರಕ್ಷಣೆಗಾಗಿ, ಅವರ ಸುರಕ್ಷತೆಗಾಗಿ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಗಲಿರುಳೆನ್ನದೆ ಜನರ ರಕ್ಷಣೆಗಾಗಿ ಕುಟುಂಬವನ್ನು ಬಿಟ್ಟು ಶ್ರಮಿಸುತ್ತಿರುತ್ತಾರೆ.
ಯಾರೋ ಕೆಲವರು ತಪ್ಪುಗಳನ್ನು ಮಾಡಿದಾಗ ಇಡಿ ಇಲಾಖೆಯನ್ನೆ ದೂಷಿಸುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸುತ್ತಾರೆ. ಆದರೆ ದೊಡ್ಡಬಳ್ಳಾಪುರದ ಜನತೆ ಕರ್ತವ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹತ್ತು ವರ್ಷಗಳ ನಂತರವೂ ಪೋಲಿಸ್ ಅಧಿಕಾರಿಯನ್ನು ನೆನೆದು ಕಾರ್ಯಕ್ರಮ ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಮರೇಶ ಗೌಡ ಮಾತನಾಡಿ, ನಾವು ಎಷ್ಟು ವರ್ಷ ಬದುಕಿದ್ದೆವು ಎನ್ನುವುದಕ್ಕಿಂತ, ಹೇಗೆ ಬದುಕಿದ್ದೆವು ಎಂಬುದು ಮುಖ್ಯ. ಒಳ್ಳೆಯ ಕೆಲಸ ಮಾಡಿದಾಗ ಸಮಾಜ ಎಂದಿಗೂ ನಮ್ಮನ್ನು ಮರೆಯುವುದಿಲ್ಲ.
ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಜನ ಗೌರವಿಸುತ್ತಾರೆ. ಅದಕ್ಕೆ ಉದಾಹರಣೆ ಜಗದೀಶ್ ಅವರ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.
ಪೊಲೀಸ್ ಇಲಾಖೆ ಸಿಬ್ಬಂದಿಗಳು ಹೊಗಳಿಕೆ, ತೆಗಳಿಕೆಗಳಿಗೆ ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಬೇಕು. ಈ ರೀತಿಯ ಕಾರ್ಯಕ್ರಮಗಳಿಂದ ನಮ್ಮ ಮೇಲೆ ಜವಾಬ್ದಾರಿ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಾಜಘಟ್ಟ ರವಿ, ಕಾರ್ಯದರ್ಶಿ ಮಲ್ಲೇಶ್, ಉಪಾಧ್ಯಕ್ಷ ಪರಮೇಶ್, ಹುತಾತ್ಮ ಜಗದೀಶ್ ಕುಟುಂಬದ ಸದಸ್ಯರು, ಪೊಲೀಸ್ ಇಲಾಖೆ ಸೇರಿದಂತೆ ಇತರೆ ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.