ದೊಡ್ಡಬಳ್ಳಾಪುರ: ತಾಲೂಕಿನಾದ್ಯಂತ ಮಹಾಶಿವರಾತ್ರಿಯನ್ನು (Maha Shivaratri) ಶ್ರದ್ದಾ ಭಕ್ತಿ, ಸಡಗರದಿಂದ ಆಚರಿಸಲಾಯಿತು. ವಿವಿಧ ಶಿವನ ದೇವಾಲಯಗಳಿಗೆ ನೂರಾರು ಭಕ್ತರು ತೆರಳಿ, ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ಬೆಳಗಿನಿಂದ ಅಭಿಷೇಕ ವಿಶೇಷ ಪೂಜಾ ಕಾರ್ಯಕಕ್ರಮಗಳು ಜರುಗಿದವು. ಹಲವಾರು ದೇವಾಲಯಗಳಲ್ಲಿ ರುದ್ರಾಭಿಷೇಕ, ಕ್ಷೀರಾಭಿಷೇಕ, ರುದ್ರಹೋಮಗಳು ನಡೆದವು.
ಸಂಜೆ ಮನೆಗಳಲ್ಲಿ ಪೂಜೆ, ಫಲಹಾರ ಸೇವನೆ ಆಚರಣೆಗಳು ನಡೆದವು. ಶ್ರದ್ಧಾಳುಗಳು ಸಂಪ್ರದಾಯದಂತೆ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಸಮರ್ಪಿಸಿ ಉಪವಾಸ, ಪೂಜೆಗಳಲ್ಲಿ ನಿರತರಾಗಿದ್ದರು. ಸಂಜೆ ಅಖಂಡ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಗರದ ಬಸವಭವನದ ಬಳಿಯ ಸ್ವಯಂಭುಕೇಶ್ವರ (ಸೋಮೇಶ್ವರ) ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯೋಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದರು.
ತಾಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರ ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪ್ರಾತಃಕಾಲ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಅಲಂಕಾರ ನಡೆದವು. ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಶಿವಭಕ್ತರು ಪಾಲ್ಗೊಂಡು ಸಂಪನ್ನಗೊಂಡರು.
ನಗರದ ಶ್ರೀ ನಗರೇಶ್ವರ ದೇವಾಲಯದಲ್ಲಿ ಕೈಲಾಸದ ಅಲಂಕಾರದಲ್ಲಿ ಶಿವನ ಮೂರ್ತಿ ಹಾಗೂ ದೇವತಾ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಚಿಕ್ಕಪೇಟೆಯ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಪಾರಾಯಣ ನಡೆಯಿತು.
ತೇರಿನ ಬೀದಿಯಲ್ಲಿರುವ ಚಂದ್ರಮೌಳೇಶ್ವರ ದೇವಾಲಯ, ಶ್ರೀಕಂಠೇಶ್ವರ ದೇವಾಲಯ, ಶ್ರೀನಗರದ ಮಲೈ ಮಹದೇಶ್ವರ ದೇವಾಲಯ, ರುಮಾಲೆ ವೃತ್ತದ ಶ್ರೀ ಗಣಪತಿ ದೇವಾಲಯ, ಕುಚ್ಚಪ್ಪನಪೇಟೆಯ ಕಾಳಿಕ ಕಮಟೇಶ್ವರ, ಮುಖ್ಯರಸ್ತೆಯ ಬಸವಣ್ಣ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜಾ ಕಾರ್ಯೆಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಕನಸವಾಡಿಯ ಶ್ರೀ ಶನಿ ಮಹಾತ್ಮಸ್ವಾಮಿ ದೇವಾಲಯ, ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಅಲಂಕಾರ, ಪೂಜಾ ಕಾರ್ಯಯಕ್ರಮಗಳು ನೆರವೇರಿದವು.
ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಹುಲುಕುಡಿ ಬೆಟ್ಟದ ತಪ್ಪಲಿನ ಮಾಡೇಶ್ವರ ಗ್ರಾಮದ ಇತಿಹಾಸ ಪ್ರಸಿದ್ದ ಮುಕ್ಕಣ್ಣೇಶ್ವರ ದೇವಾಲಯದಲ್ಲಿ ಶಿವಲಿಂಗ ಮೂರ್ತಿಗೆ ಬೆಳಗಿನಿಂದಲೇ ಅಭಿಷೇಕ, ಅಲಂಕಾರ ಮಾಡಲಾಗಿತ್ತು.
ಮಾಕಳಿ ಬೆಟ್ಟದ ಮಾಕಳಿ ಮಲ್ಲೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು.
ಮಧುರೆ ಹೋಬಳಿ ಮಾರಸಂದ್ರದ ಶ್ರೀ ಕೊಂಡದಮ್ಮ(ಈರಮಾಸ್ತಮ್ಮ) ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಸಂಜೆ ಲಕ್ಷ ದೀಪೋತ್ಸವ, ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು.
ತಾಲೂಕಿನ ಹುಲುಕುಡಿ ಬೆಟ್ಟದ ತಪ್ಪಲಿನ ಗ್ರಾಮಗಳಾದ ಬೈರಾಪುರ, ಮಾಕಳಿ ಬೆಟ್ಟ, ಹೊಸಹಳ್ಳಿಯ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ, ತಾಲೂಕಿನ ಮಧುರೆ ಹೋಬಳಿ ಕನ್ನಮಂಗಲ ಗೇಟ್ ಅಮ್ಮನ ಗುಡ್ಡ ಆದಿಶಕ್ತಿ ಅಮ್ಮನವರ ಮಹಾಕ್ಷೇತ್ರದಲ್ಲಿ ಏಕಪೀಠ ಶಕ್ತಿ ಪಂಚಲಿಂಗನಾಥೇಶ್ವರ ಸ್ವಾಮಿ, ಅರಳು ಮಲ್ಲಿಗೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಆರೂಢಿಯ ಕೋಡಿ ಮಲ್ಲೇಶ್ವರ ಸ್ವಾಮಿಗೆ ಅಭಿಷೇಕ ಪೂಜಾ ಕಾರ್ಯಕ್ರಮಗಳು ನೆರವೇರಿದವು.