ನವದೆಹಲಿ: ಅಮೇರಿಕಾ, ಇಸ್ರೇಲ್ ಸೇರಿ ಇರಾನ್ ಮೇಲೆ ನಡೆಸುತ್ತಿರುವ ಯುದ್ಧ ಭಾರತದ ಮೇಲೆ ನೇರ ಪರಿಣಾಮ ಬೀರಿದ್ದು, ಗ್ಯಾಸ್ ಬೆಲೆ ಏರಿಕೆ, ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರೆ, ಷೇರು ಮಾರುಕಟ್ಟೆ (Indian stock market) ಮೇಲೆ ಗಂಭೀರ ಪರಿಣಾಮ ಬೀರಿದ್ದು, ಯುದ್ಧ ಆರಂಭವಾದ ದಿನದಿಂದ ಈ ತನಕ ಹೂಡಿಕೆದಾರರು ಬರೊಬ್ಬರಿ 30 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ.
ಫೆಬ್ರವರಿ 28ರಂದು ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ಭಾರತೀಯ ಷೇರು ಮಾರುಕಟ್ಟೆ ಗಣನೀಯ ಪ್ರಮಾಣದಲ್ಲಿ ಕುಸಿ ದಿದ್ದು, ಅಂದು 463 ಲಕ್ಷ ಕೋಟಿಗಳಷ್ಟಿದ್ದ ಮಾರುಕಟ್ಟೆ ಬಂಡವಾಳ, ಮಾರ್ಚ್ 6 ಹೊತ್ತಿಗೆ 444 ಲಕ್ಷ ಕೋಟಿಗೆ ಇಳಿಕೆಯಾಗಿ ಬರೊಬ್ಬರಿ 19 ಲಕ್ಷ ಕೋಟಿ ಕುಸಿದಿತ್ತು. ಬಳಿಕ ಮಾರ್ಚ್ 9ರ ಸೋಮವಾರ ಷೇರುಪೇಟೆ ಮತ್ತೆ 12 ಲಕ್ಷ ಕೋಟಿಗಳಷ್ಟು ಕುಸಿದು 432 ಲಕ್ಷ ಕೋಟಿಗಳಿಗೆ ಬಂದು ತಲುಪಿದೆ.
ಷೇರುದಾರ ಆತ್ಮಹತ್ಯೆ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ನಷ್ಟ ಮತ್ತು ಸಾಲಗಾರರ ಕಾಟದಿಂದ ಬೇಸತ್ತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಬಾಳ ಬಳಿ ನಡೆದಿದೆ.
ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ್ದ ವೆಂಕಟೇಶ್ (50 ವರ್ಷ) ನಷ್ಟ ಅನುಭವಿಸಿದ್ದರು. ಆ ನಷ್ಟವನ್ನು ಸರಿದೂಗಿಸಲು ಹಲವರಿಂದ ಸಾಲ ಪಡೆದಿದ್ದರು. ಇತ್ತೀಚಿನ ದಿನಗಳಲ್ಲಿ ಸಾಲಗಾರರ ಒತ್ತಡ ಹೆಚ್ಚಾಗಿತ್ತು. ಭಾನುವಾರ ಸಂಜೆ ಡೆತ್ ನೋಟ್ ಬರೆದಿದ್ದ ವೆಂಕಟೇಶ್, ನನ್ನ ಸಾವಿಗೆ ನಾನೇ ಕಾರಣ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸಿದ್ದೆ. ಇದರಿಂದ ಸಾಲಗಾರನಾದೆ. ಈಗ ಅನಾರೋಗ್ಯವೂ ಕಾಡುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಈ ನಡುವೆ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದ್ದು ಇಸ್ರೇಲ್ ಮತ್ತು ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್‌ನ ಇಸ್ರೇಲ್ ಮತ್ತು ಕೊಲ್ಲಿ ರಾಷ್ಟ್ರಗಳ ತೈಲಾಗಾರಗಳ ಮೇಲೆ ಕ್ಷಿಪಣಿ ಮತ್ತು ಡೋನ್ ಮೂಲಕ ದಾಳಿ ನಡೆಸಿದೆ.
ಇರಾನ್, ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳ ತೈಲಬಾವಿಗಳು ಹೊತ್ತಿ ಉರಿಯುತ್ತಿದ್ದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ದೀರ್ಘ ಕಾಲ ಪರಿಣಾಮ ಬೀರುವ ಸಾಧ್ಯತೆ ಇದೆ.