ದೊಡ್ಡಬಳ್ಳಾಪುರ; ತಾಲೂಕು ಹಂತದಲ್ಲಿ ಮಾ.18 ರಿಂದ ಏ.2 ರವರೆಗೆ 2025-26ನೇ ಸಾಲಿನ ಎಸ್ಎಸ್ಎಲ್ಸಿ (SSLC) ಪರೀಕ್ಷೆಗಳನ್ನು ತಾಲೂಕಿನ14 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಲಗುಬಗೆಯಿಂದ ಪರೀಕ್ಷಾ ಕೇಂದ್ರಗಳಿಗೆ ದೌಡಾಯಿಸುತ್ತಿದ್ದಾರೆ.

ಬೈಕ್, ಆಟೋ, ಸರಕಾರಿ ಸಾರಿಗೆ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಬರುತ್ತಿರುವ ವಿದ್ಯಾರ್ಥಿಗಳು, ನೊಂದಣಿ ಸಂಖ್ಯೆ ಹಾಗೂ ಪರೀಕ್ಷಾ ಕೊಠಡಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ
ದೊಡ್ಡಬಳ್ಳಾಪುರ ತಾಲೂಕಿನಲ್ಲಿ 17 ಸರ್ಕಾರಿ ಪ್ರೌಢಶಾಲೆಗಳು, 4 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆಗಳು, 12 ಅನುದಾನಿತ ಪ್ರೌಢಶಾಲೆಗಳು, 36 ಅನುದಾನ ರಹಿತ ಪ್ರೌಢಶಾಲೆಗಳನ್ನು ಒಳಗೊಂಡಂತೆ ಒಟ್ಟು 69 ಪ್ರೌಢಶಾಲೆಗಳಿದ್ದು, ಈ ಪ್ರೌಢಶಾಲೆಗಳಿಂದ ತಾಲ್ಲೂಕಿನ 14 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದೆ.
3626 ಶಾಲಾ ವಿದ್ಯಾರ್ಥಿಗಳು, 285 ಪುನಾರಾವರ್ತಿತ ವಿದ್ಯಾರ್ಥಿಗಳು ಹಾಗೂ 53 ಖಾಸಗಿ ವಿದ್ಯಾರ್ಥಿಗಳು,18 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಒಳಗೊಂಡಂತೆ ಒಟ್ಟಾರೆ 3982 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಪರೀಕ್ಷಾ ಬಂದೋಬಸ್ತ್
ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿಯವರು ವಿದ್ಯಾರ್ಥಿಗಳಿಗೆ ಸ್ಟಡಿ ಕಾರ್ನರ್ ಮೂಲಕ ವಿಷಯ ಹಾಗೂ ಪಾಠಾಧಾರಿತ ಪ್ರಶ್ನೆ ಕೋಠಿ,4 ಮಾದರಿ ಪ್ರಶ್ನೆಪತ್ರಕೆಗಳು ಹಾಗೂ ಮಾದರಿ ಉತ್ತರಗಳನ್ನು ಒದಗಿಸಿರುತ್ತದೆ. ಅಲ್ಲದೆ ರಾಜ್ಯ ಹಂತದಲ್ಲಿ 3 ಪೂರ್ವ ಸಿದ್ದತಾ ಪರೀಕ್ಷೆಗಳನ್ನು ನಡೆಸಿರುತ್ತದೆ. ವಿದ್ಯಾರ್ಥಿಗಳ ಉತ್ತಮ ಅಭ್ಯಾಸಕ್ಕಾಗಿ ಸಂಪನ್ಮೂಲ ಶಿಕ್ಷಕ ತಂಡದಿಂದ ಮಾರ್ಗದರ್ಶನ ನೀಡಲಾಗಿದೆ.
ಹಾಗೆಯೇ ಈ ಬಾರಿ 14 ಪರೀಕ್ಷಾ ಕೇಂದ್ರಗಳಲ್ಲಿ 5 ಪಟ್ಟಣ ವ್ಯಾಪ್ತಿಯಲ್ಲಿ ಮತ್ತು 9 ಗ್ರಾಮೀಣ ಭಾಗದ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ವೆಬ್ ಕಾಸ್ಟಿಂಗ್ ತಂಡದ ವೀಕ್ಷಣೆ ನಡೆಸಲಾಗುತ್ತಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಮೂಲಭೂತ ಸೌಲಭ್ಯಗಳಾದ ಗಾಳಿ, ಕುಡಿಯುವ ನೀರು, ವಿದ್ಯುತ್, ಇಂಟರ್ ನೆಟ್, ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಕ್ರಮ ವಹಿಸಲಾಗಿದೆ. ಆರೋಗ್ಯ ಇಲಾಖೆ ಸಹಕಾರ ಹಾಗೂ ಪೋಲೀಸ್ ಇಲಾಖೆಯ ಸಹಕಾರ ಭದ್ರತೆಯೊಂದಿಗೆ ಸುಸೂತ್ರವಾಗಿ ಪರೀಕ್ಷಾ ಕಾರ್ಯ ನಡೆಯಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಖಜಾನೆ ಅಧಿಕಾರಿಗಳು, ತಹಶೀಲ್ದಾರವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸೂಕ್ತ ಭದ್ರತೆಯೊಂದಿಗೆ ಪ್ರಶ್ನೆಪತ್ರಿಕೆಗಳನ್ನು ಸಕಾಲದಲ್ಲಿ ಪರೀಕ್ಷಾ 14 ಕೇಂದ್ರಗಳಿಗೆ ತಲುಪಿಸಲು ವಾಹನ ವ್ಯವಸ್ಥೆ ಮತ್ತು 06 ಮಾರ್ಗಾಧಿಕಾರಿಗಳ ನೇಮಕ ಮಾಡಿಕೊಳಲಾಗಿದೆ.
ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು 14 ಮುಖ್ಯ ಅಧೀಕ್ಷಕರು. 3 ಉಪಅಧೀಕ್ಷಕರು,14 ಪ್ರಶ್ನೆಪತ್ರಿಕೆ ಅಭಿರಕ್ಷಕರು, 239 ಕೊಠಡಿ ಮೇಲ್ವಿಚಾರಕರನ್ನು,.14 ಮೊಬೈಲ್ ಸ್ವಾಧೀನಾಧಿಕಾರಿಗಳು,14 ಸ್ಥಾನಿಕ ಜಾಗೃತ ದಳ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ಜಿಲ್ಲಾ ಹಂತದ ಅಧಿಕಾರಿ ತಂಡ ಜಾಗೃತ ವಿಚಕ್ಷಣ ತಂಡಗಳಲ್ಲಿ ಕಾರ್ಯ ನಿರ್ವಹಿಸಲ್ಲಿದ್ದು ಪರೀಕ್ಷಾ ಗೌಪ್ಯತೆ ಮತ್ತು ಪಾವಿತ್ರತೆ ಕಾಪಾಡಿಕೊಂಡು ಮಂಡಳಿಯ ನಿಯಮಾನುಸಾರ ಎಸ್.ಎಸ್.ಎಲ್.ಸಿ ಪರೀಕ್ಷಾ ಕಾರ್ಯವನ್ನು ಬಹಳ ಸುವ್ಯವಸ್ಥಿತವಾಗಿ, ಪಾರದರ್ಶಕವಾಗಿ, ಶಾಂತಿಯುತವಾಗಿ,ಯಾವುದೇ ಅವ್ಯವಹಾರಗಳಿಗೆ ಆಸ್ಪದ ಇಲ್ಲದಂತೆ ನಡೆಸಲು ಸಕಲ ರೀತಿಯಲ್ಲೂ ಅಗತ್ಯ ಕ್ರಮ ವಹಿಸಲಾಗುತ್ತಿದೆ.
ಪರೀಕ್ಷಾ ವೇಳಾಪಟ್ಟಿ
ಬೆಳಿಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಪರೀಕ್ಷೆಗಳು ನಡೆಯಲಿವೆ.
ಮಾ.18-ಪ್ರಥಮಭಾಷೆ (ಕನ್ನಡ), ಮಾ.23- ವಿಜ್ಞಾನ, ಮಾ.25-ಇಂಗ್ಲೀಷ್, ಮಾ.28- ಗಣಿತ, ಮಾ.30- ತೃತೀಯ ಭಾಷೆ (ಹಿಂದಿ), ಏ.2-ಸಮಾಜ ವಿಜ್ಞಾನ.
14 ಪರೀಕ್ಷಾ ಕೇಂದ್ರಗಳು
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, , ಶ್ರೀ ದೇವರಾಜ ಅರಸ್ ಪ್ರೌಢಶಾಲೆ,ಕಾರ್ಮೆಲ್ ಜ್ಯೋತಿ ಪ್ರೌಢಶಾಲೆ, ಕೊಂಗಾಡಿಯಪ್ಪ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಅರಳುಮಲ್ಲಿಗೆ ಬಾಗಿಲು, ಸರ್ಕಾರಿ ಪ್ರೌಢಶಾಲೆ ಬಾಶೆಟ್ಟಿಹಳ್ಳಿ, ಜಿ.ಜೆ.ಸಿ ತೂಬಗೆರೆ, ಶ್ರೀ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಪ್ರೌಢಶಾಲೆ, ಕೆ.ಪಿ.ಎಸ್ ದೊಡ್ಡಬೆಳವಂಗಲ, ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ, ಜಿ.ಜೆ.ಸಿ ಕನಸವಾಡಿ, ಸರ್ಕಾರಿ ಪ್ರೌಢಶಾಲೆ ಚನ್ನವೀರನಹಳ್ಳಿ, ಸರ್ಕಾರಿ ಪ್ರೌಢಶಾಲೆ ಹೊಸಹಳ್ಳಿ, ಶ್ರೀ ರಾಮಪ್ರೌಢಶಾಲೆ ಕಾಡನೂರು ಪರೀಕ್ಷಾ ಕೇಂದ್ರಗಳಾಗಿವೆ.