ದೊಡ್ಡಬಳ್ಳಾಪುರ: ಎಸ್ಎಸ್ಎಲ್ಸಿ (SSLC) ವಾರ್ಷಿಕ ಪರೀಕ್ಷೆಗಳ ಮೊದಲ ದಿನದ ಪ್ರಥಮ ಭಾಷೆ (ಕನ್ನಡ) ವಿಷಯದ ಪರೀಕ್ಷೆ ತಾಲೂಕಿನಲ್ಲಿ ಸುಗಮವಾಗಿ ನಡೆದಿದೆ. ಯಾವುದೇ ಪರೀಕ್ಷಾ ಅಕ್ರಮಗಳ ಕುರಿತು ವರದಿಯಾಗಿಲ್ಲ.

ಬುಧವಾರ ನಡೆದ ಪ್ರಥಮ ಭಾಷೆ ಪರೀಕ್ಷೆಗೆ 25 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಪ್ರಥಮ ಭಾಷೆಗೆ 14 ಪರೀಕ್ಷಾ ಕೇಂದ್ರಗಳಲ್ಲಿ 3701 ಹೊಸ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 3676 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪೋಷಕರು ಪರೀಕ್ಷಾ ಕೇಂದ್ರಗಳಿಗೆ ಮಕ್ಕಳನ್ನು ಬಿಟ್ಟು , ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ನೋಂದಣಿ ಸಂಖ್ಯೆ ಹುಡುಕಿ, ಕೊಠಡಿಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪರೀಕ್ಷಾ ಕೆಂದ್ರಗಳಲ್ಲಿ ಬಂದೋಬಸ್ತ್
ಪರೀಕ್ಷಾ ಕೇಂದ್ರಗಳ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಕ್ರಮ ವಹಿಸಲಾಗಿತ್ತು. ಆರೋಗ್ಯ ಇಲಾಖೆ ಸಹಕಾರ ಹಾಗೂ ಪೋಲೀಸ್ ಇಲಾಖೆಯ ಸಹಕಾರ ಭದ್ರತೆಯೊಂದಿಗೆ ಸುಸೂತ್ರವಾಗಿ ಪರೀಕ್ಷಾ ಕಾರ್ಯ ನಡೆಯಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿತ್ತು.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ತಲುಪಲು ಸಾರಿಗೆ ಸಂಸ್ಥೆಯಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.