ತುಮಕೂರು: ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

ಹೌದು ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಠಾಣೆಯ ಪೊಲೀಸರು ಬಂಧಿಸಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದ್ದು, ಸ್ಥಳೀಯರು ಮತ್ತು ರಾಜಕೀಯ ನಾಯಕರು ಈ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ವ್ಯಕ್ತಿಯನ್ನು ಯಳನಾಡು ಗ್ರಾಮದ ಕಾಂತರಾಜು (45 ವರ್ಷ) ಎಂದು ಗುರುತಿಸಲಾಗಿದೆ.
ಮೃತ ಸೇರಿ 6 ಮಂದಿಯನ್ನು ಜೂಜಾಟದ ಆರೋಪದ ಮೇಲೆ ನಡೆಸಿದ ಪೊಲೀಸರು ವಶಕ್ಕೆ ಪಡೆದಿದ್ದರು. ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾದರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ ಎಂದು ವರದಿಯಾಗಿದೆ.
ಆದರೆ, ಮೃತರ ಕುಟುಂಬದವರು ಪೊಲೀಸರ ಅತ್ಯಧಿಕ ಒತ್ತಡ ಮತ್ತು ಕಿರುಕುಳ ಈ ಸಾವಿಗೆ ನೇರ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಹುಳಿಯಾರು ಪೊಲೀಸ್ ಠಾಣೆಯ ಮುಂದೆ ಗ್ರಾಮಸ್ಥರು ಜಮಾಯಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಮತ್ತು ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್ ಭೇಟಿ ನೀಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡುಬರುತ್ತಿದೆ. ಭದ್ರತೆಗಾಗಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ.