ವಿಶಾಖಪಟ್ಟಣ: ಇಲ್ಲಿನ ವೈಜಾಗ್ ಸ್ಟೀಲ್ (ರಾಷ್ಟ್ರೀಯ ಇಸ್ಪಾತ್ ನಿಗಮ ಲಿಮಿಟೆಡ್ – RINL) ಕಾರ್ಖಾನೆಯ ಪುನಶ್ಚೇತನಕ್ಕೆ ₹11,400 ಕೋಟಿ ಬೃಹತ್ ಮೊತ್ತದ ವಿಶೇಷ ಪ್ಯಾಕೇಜ್ ನೀಡಿದ ನಂತರ ಮತ್ತೊಮ್ಮೆ ಕಾರ್ಖಾನೆಗೆ ಭೇಟಿ ನೀಡಿದ ಕೇಂದ್ರದ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ವಿಸ್ತೃತ ಪರಿಶೀಲನೆ ನಡೆಸಿದರು.

ಕಾರ್ಖಾನೆಗೆ ನೀಡಿದ ಎರಡು ದಿನಗಳ ಮಹತ್ವದ ಭೇಟಿಯ ಸಂದರ್ಭದಲ್ಲಿ ಸಚಿವರು ಅಡಳಿತ ವರ್ಗದ ಜತೆ ಸಮಾಲೋಚನೆ, ಕಾರ್ಖಾನೆಯ ವಿವಿಧ ವಿಭಾಗಗಳ ವೀಕ್ಷಣೆ ಸೇರಿದಂತೆ ಹಲವಾರು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಅಲ್ಲದೆ, ವಿಶೇಷವಾಗಿ ಬ್ಲಾಸ್ಟ್ ಪೆರ್ನೆಸ್ (ಊದು ಕುಲುಮೆ) ಗಳ ವೀಕ್ಷಣೆ, ಉತ್ಪಾದನಾ ಕ್ಷಮತೆ ಹಾಗೂ ಆಡಳಿತ ಮಂಡಳಿಯ ಕ್ಷಮತೆಯ ಬಗ್ಗೆ ಸರಣಿ ಸಭೆಗಳನ್ನು ಸಚಿವರು ನಡೆಸಿದರು.
ತಮ್ಮ ಭೇಟಿಯನ್ನು ಕೋಕ್ ಓವೆನ್ ಬ್ಯಾಟರಿಗಳ ಪರಿಶೀಲನೆಯೊಂದಿಗೆ ಆರಂಭ ಮಾಡಿದ ಸಚಿವರು, ಬಳಿಕ ಕಾರ್ಯಾಚರಿಸುತ್ತಿರುವ ಎಲ್ಲಾ ಬ್ಲಾಸ್ಟ್ ಪೆರ್ನೀಸ್ ಗಳನ್ನು ಖುದ್ದು ವೀಕ್ಷಿಸಿ, ಆಗುತ್ತಿರುವ ಉತ್ಪಾದನೆ ಬಗ್ಗೆ ಉನ್ನತ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ, ಉತ್ಪಾದನೆಯ ಕ್ಷಮತೆ, ಗುಣಮಟ್ಟದ ಬಗ್ಗೆ ಸಚಿವರು ಆಡಳಿತ ಮಂಡಳಿಗೆ ಕೆಲ ಸ್ಪಷ್ಟ ಸೂಚನೆಗಳನ್ನು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಹಿನ್ನೆಲೆಯಲ್ಲಿ 2025 ಜೂನ್ 27ರಂದು ಸಚಿವ ಕುಮಾರಸ್ವಾಮಿ ಅವರು ಕಾರ್ಖಾನೆಯ ಪುನಶ್ಚೇತನಕ್ಕೆ ₹11,400 ಕೋಟಿ ಮೊತ್ತದ ಬೃಹತ್ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದರು. ಆ ನಂತರ ಕಾರ್ಯಾರಂಭ ಮಾಡಲಾದ ಮೂರು ಬ್ಲಾಸ್ಟ್ ಪರ್ನೀಸ್ ಗಳ ಉತ್ಪಾದನ ಮಟ್ಟ ಹಾಗೂ ಕ್ಷಮತೆಯನ್ನು ಸಚಿವರು ಪರಿಶೀಲಿಸಿದರು.
ಉನ್ನತ ಅಧಿಕಾರಿಗಳ ಜತೆ ಸಭೆ
ಕಾರ್ಖಾನೆಯ ವಿಸ್ತ್ರತ ಭೇಟಿ ನಂತರ ಕೇಂದ್ರ ಸಚಿವರು ಉಕ್ಕು ಕಾರ್ಖಾನೆಯ ಆಡಳಿತ ಮಂಡಳಿಯ ಜತೆ ಮಹತ್ವದ ಸಭೆ ನಡೆಸಿದರು.
ಮುಖ್ಯವಾಗಿ, ವಿಶೇಷ ಪ್ಯಾಕೇಜ್ ನೀಡದ ನಂತರ ಆಗಿರುವ ಪ್ರಗತಿ, ಉತ್ಪಾದನೆಯ ಹೆಚ್ಚಳ, ಉತ್ಪಾದನಾ ಸ್ಥಿರತೆಗೆ ಕೈಗೊಂಡಿರುವ ಕ್ರಮಗಳು, ಕಚ್ಚಾ ವಸ್ತುಗಳ ಪೂರೈಕೆ, ಸಿಬ್ಬಂದಿ ಹಾಗೂ ಕಾರ್ಮಿಕರ ಕುರಿತಾದ ವಿಷಯಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ನಂತರ ಕಾರ್ಮಿಕ ಸಂಘಟನೆಗಳ ಪ್ರಮುಖರ ಜತೆ ಕೂಡ ಸಚಿವರು ಸಮಾಲೋಚನೆ ಮಾಡಿದರು.
ಭಾರತದ ಒಟ್ಟಾರೆ ಅಭಿವೃದ್ಧಿಗೆ ಉಕ್ಕು ಕ್ಷೇತ್ರವೇ ಪ್ರಮುಖ ಆಧಾರ ಸ್ತಂಭವಾಗಿದ್ದು, ಈ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಿ ಪ್ರಧಾನಿಗಳ ಕನಸಿನಂತೆ ಆತ್ಮನಿರ್ಭರ ಭಾರತ ಸಾಕಾರಕ್ಕೆ ಕೊಡುಗೆ ನೀಡಲಾಗುವುದು. 2030ರ ವೇಳೆಗೆ ಭಾರತವು ದೇಶೀಯವಾಗಿ 300 ದಶಲಕ್ಷ ಮೆಟ್ರಿಕ್ ಟನ್ ಉಕ್ಕು ಉತ್ಪಾದನೆ ಮಾಡುವ ಗುರಿ ಹೊಂದಿದ್ದು, ಅದರಂತೆ ವೈಜಾಗ್ ಸ್ಟೀಲ್ ಕಾರ್ಯ ನಿರ್ವಹಿಸುತ್ತಿದೆ. ತಮ್ಮ ಸಚಿವಾಲಯವು ಅದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು.
ಕೇಂದ್ರ ಸಚಿವರ ಭೇಟಿ ಸಂದರ್ಭದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮ, ವಿಶಾಖಪಟ್ಟಣದ ಲೋಕಸಭೆ ಸದಸ್ಯ ಎಂ. ಶ್ರೀಭರತ್ ಸೇರಿದಂತೆ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳು ಜತೆಯಲ್ಲಿ ಇದ್ದರು.