ದೊಡ್ಡಬಳ್ಳಾಪುರ: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಲಿ (KIADB) ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿ ಉದ್ದೇಶಿಸಿರುವ 2100 ಎಕರೆ ಭೂ ಸ್ವಾಧೀನದ ವಿರುದ್ಧ ರೈತರು ಕೆರಳಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ.

ಇಂದು ದೊಡ್ಡಬೆಳವಂಗಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ಸೊನ್ನೇನಹಳ್ಳಿ, ರಾಂಪುರ ನಾರನಹಳ್ಳಿ ಗ್ರಾಮಗಳ ರೈತರು ಬಲವಂತದ ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡಿರುವುದಾಗಿ ಆರೋಪಿಸಿದ್ದು, ಇಲಾಖೆಯ ನಿಲುವನ್ನು ಖಂಡಿಸಿದರು.
ಈವೇಳೆ ನಾಳೆ ಖಾನಿಮಠದಿಂದ ದೊಡ್ಡಬೆಳವಂಗಲ ನಾಡ ಕಚೇರಿವರೆಗೆ ಜಾಥಾ, ಪ್ರತಿಭಟನೆ ಹಾಗೂ ನಾಡ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಭೂ ಸ್ವಾಧೀನದ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಟಿ. ವೆಂಕಟರಮಣಯ್ಯ, ಜೆಡಿಎಸ್ ಮುಖಂಡ ಬಿ.ಮುನೇಗೌಡ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡಿದರು.
ನಾಳೆಯ ಪ್ರತಿಭಟನೆಯ ಬಳಿಕ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಲು ನಿಯೋಗ ಕರೆದೊಯ್ಯಲಾಗುವುದೆಂದ ಟಿ.ವೆಂಕಟರಮಣಯ್ಯ ಭರವಸೆ ನೀಡಿದರು.
ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ರೈತ ಸಂಘದ ಪ್ರಭ ಬೆಳವಂಗಲ, ರಾಜಗೋಪಾಲ್, ತಿಮ್ಮೆಗೌಡ, ಧರ್ಮೇಂದ್ರ, ರಾಮಕೃಷ್ಣಯ್ಯ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಮುಖಂಡರು ಇದ್ದರು.