ಬೆಂಗಳೂರು: ವರ್ಗಾವಣೆ ಮಸೂದೆಯಲ್ಲಿ ‘ಡಿ’ ಗ್ರೂಪ್ ನೌಕರರನ್ನೂ ಸೇರಿಸಿ. ‘ಡಿ’ ಗ್ರೂಪ್ ನೌಕರರಿಲ್ಲದ ಶಾಲೆಗಳಲ್ಲಿ (School) ಮಕ್ಕಳಿಂದ ಗುಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜೆಡಿಎಸ್ (JDS) ಸದಸ್ಯ ಸುರೇಶ್ ಬಾಬು (Suresh Babu) ಸದನದ ಗಮನ ಸೆಳೆದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ಅದರಲ್ಲಿ ತಪ್ಪೇನಿಲ್ಲ, ನಾವು ವಿದ್ಯಾರ್ಥಿಯಾಗಿದ್ದಾಗ ನಾವೇ ಸ್ವಚ್ಛ ಮಾಡುತ್ತಿದ್ದೆವು. ಮಾಡಲಿ ಮಕ್ಕಳಿಗೆ ಗೊತ್ತಾಗುತ್ತದೆ ಎಂದು ಸಮರ್ಥಿಸಿ ಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್ ಬಾಬು, ಹಾಗಾದಾರೆ ಆ ರೀತಿ ಕಾನೂನಾದರೂ ಮಾಡಿ. ಇಲ್ಲವಾದರೆ ಪೋಷಕರಲ್ಲಿ ಗೊಂದಲ ಉಂಟಾಗುತ್ತದೆ ಎಂದು ಸಲಹೆ ನೀಡಿದರು.
ಇದೇ ವೇಳೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಶೌಚಾಲಯ ಕ್ಲೀನ್ ಮಾಡಲು ಶಾಲಾ ಮಕ್ಕಳಿಗೆ ಅವಕಾಶ ಕೊಡಿ. ಶಾಲೆಗಳ ಶೌಚಾಲಯವನ್ನು ಮಕ್ಕಳೇ ಕ್ಲೀನ್ ಮಾಡಲಿ. ನಾವೆಲ್ಲಾ ಮಾಡಿ ಬಂದಿದ್ದೇವೆ. ಅವರು ಕಲಿಯಲಿ ಎಂದು ಒತ್ತಾಯಿಸಿದರು.
ಈ ವೇಳೆ ಸ್ಪೀಕರ್ ಆ ಸಂಬಂಧ ಕಾನೂನು ಬದಲಾವಣೆ ಮಾಡಲು ಸಾಧ್ಯನಾ ನೋಡಿ ಎಂದು ಸಚಿವರಿಗೆ ಪ್ರಶ್ನಿಸಿದರು. ಇದಕ್ಕೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸುತ್ತಾ, ಮಕ್ಕಳ ಹಕ್ಕು ಅನ್ನುವುದು ಇದೆ. ಅದಕ್ಕನುಗುಣವಾಗಿ ನಿಯಮ ರೂಪಿಸಬೇಕಾಗುತ್ತದೆ.
ಹೇಗೆ ಮಾಡುವುದು ಎಂಬ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಪರಿಶೀಲಿಸೋಣ. ನಿಯಮಗಳನ್ನು ರೂಪಿಸುವಾಗ ಶಾಸಕರ ಸಲಹೆಗಳನ್ನು ಪರಿಗಣಿಸಲಾಗುವುದು ಸಚಿವರು ತಿಳಿಸಿದರು.