ದೊಡ್ಡಬಳ್ಳಾಪುರ: ಟ್ರಾನ್ಸ್ಫಾರ್ಮರ್ ಬಳಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ (Short circuit) ಬೆಂಕಿಯ ಕಿಡಿ ಜಮೀನಿಗೆ ವ್ಯಾಪಿಸಿ, ಸುಮಾರು 40ಕ್ಕೂ ಹೆಚ್ಚು ಎಕರೆ ಜಮೀನನಲ್ಲಿ ಬೆಳೆಯಲಾಗಿದ್ದ, ಮಾವು, ಅಡಿಗೆ, ತೆಂಗು, ಜಮ್ಮು ನೇರಳೆ ಗಿಡಗಳು ಸಂಪುರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲೂಕಿನ ಆರೂಢಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಬೆಂಗಳೂರು ಮೂಲದ ನಾಗರಾಜು ಎನ್ನುವವರು ಸುಮಾರು 48 ಎಕರೆ ಜಮೀನಲ್ಲಿ ಬೆಳೆಯಲಾಗಿದ್ದ 20 ಎಕರೆ ಮಾವು, ತೆಂಗು, ಅಡಿಕೆ, 28 ಎಕರೆ ಜಮ್ಮು ನೇರಳೆ ಮರಗಳು, ಅಡಿಕೆ ಗಿಡಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಅಲ್ಲದೆ 5 ಲಕ್ಷ ಮೌಲ್ಯದ ಹನಿ ನೀರಾವರಿ ಘಟಕಕ್ಕೆ ಅಳವಡಿಸಿದ್ದ ಪೈಪ್ ಲೈನ್ ಸುಟ್ಟು ಭಸ್ಮವಾಗಿದೆ.
ಬೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯ ಆರೋಪಿಸಿದ್ದು, ಅನೇಕ ಬಾರಿ ಅನಧಿಕೃತ ಸಂಪರ್ಕವನ್ನು ಕಡಿತಗೊಳಿಸದೆ ಇರುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ವ್ಯಾಪಕವಾಗಿ ಹರಡಿದ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳದ 101 ಸಂಖ್ಯೆಗೆ ಸುಮಾರು 30 ಬಾರಿ ಕರೆ ಮಾಡಿದರು ಸಂಪರ್ಕ ದೊರಕದೆ, ಬೆಂಕಿಯ ನಂದಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯ ನೌಕರರು ಅಳಲು ತೋಡಿಕೊಂಡಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ರೂ ಮೌಲ್ಯದ ಮಾವಿನ ಫಸಲು, 5 ಸಾವಿರ ಅಡಿಕೆ ಗಿಡಗಳು, 4000 ಸಾವಿರ ಜಮ್ಮು ನೇರಳೆ ಮರಗಳು, 400 ಕ್ಕೂ ತೆಂಗಿನ ಗಿಡಗಳು ಸಂಪೂರ್ಣ ಸುಟ್ಟುಕರಕಲಾಗಿದೆ.
ಆರೋಪ ಅಲ್ಲಗೆಳೆದ ಬೆಸ್ಕಾಂ
ಇನ್ನೂ ಈ ಕುರಿತು ರೈತರ ಆರೋಪವನ್ನು ಬೆಸ್ಕಾಂ ಅಧಿಕಾರಿಗಳು ತಳ್ಳಿಹಾಕಿದ್ದು, ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ. ಬೆಳಗ್ಗೆ 9.30ಕ್ಕೆ ಘಟನೆ ನಡೆದರೆ, ಮಾಧ್ಯಮವರು ತಿಳಿಸುವ ವರೆಗೂ ಮಾಹಿತಿ ಗೊತ್ತಾಗಿಲ್ಲ. ಕೂಡಲೇ ಸ್ಥಳಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.