ದೊಡ್ಡಬಳ್ಳಾಪುರ: ಶೋಭಾಯಾತ್ರೆಯಲ್ಲಿ (ShobhaYatre) ಡಿಜೆ (DJ) ಬಳಸಲು ಅನುಮತಿ ನೀಡುವಂತೆ ವಿಶ್ವ ಹಿಂದೂ ಪರಿಷತ್ತು ಬಜರಂಗದಳ ಹಾಗೂ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದಾರೆ.

ಈ ನಡುವೆ ಡಿಜೆ ಹಾಗೂ ಇತರೆ ಹೆಚ್ಚಿನ ಶಬ್ದ ಬರುವಂತಹ ಯಾವುದೇ ಸಲಕರಣೆಗಳನ್ನು ಬಳಸದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶಿಸಿದ್ದು, ತಪ್ಪಿದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಮನವಮಿಯ ಅಂಗವಾಗಿ ಬೃಹತ್ ಶೋಭಾಯಾತ್ರೆಯನ್ನು ಆಯೋಜಿಸುತ್ತಿರುವುದು ಸಂತಸ ಮತ್ತು ಶುಭದಾಯಕವಾದ ವಿಚಾರ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಶಾಂತಿ ಮತ್ತು ಕಾಪಾಡುವ ಸಲುವಾಗಿ ಡಿಜೆ ಅಥವಾ ಹೆಚ್ಚಿನ ಶಬ್ದ ಬರುವಂತಹ ಯಾವುದೇ ಸಲಕರಣೆಗಳನ್ನು ಈ ಬಾರಿ ನಿಷೇಧಿಸಲಾಗಿದೆ.
ಈಗಾಗಲೇ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಅಂತಿಮ ಘಟ್ಟದಲ್ಲಿ ಇರುತ್ತವೆ. 8, 9ನೇ ತರಗತಿಯ ಹಾಗೂ ಪ್ರಥಮ ಪಿಯುಸಿ ಪರೀಕ್ಷೆಗಳು ಸಹ ಚಾಲ್ತಿಯಲ್ಲಿರುತ್ತವೆ. ಇದಲ್ಲದೆ 60 ವಯಸ್ಸಿನ ಮೇಲ್ಪಟ್ಟಂತಹ ಹಲವಾರು ವೃದ್ಧರು 18 ವರ್ಷದೊಳಗಿನ ಮಕ್ಕಳು ಸಾವಿರಾರು ಸಾವಿರಾರು ಸಂಖ್ಯೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಇರುತ್ತಾರೆ.
ಇಂತಹ ಸಂದರ್ಭದಲ್ಲಿ ಅವರುಗಳ ಆರೋಗ್ಯದ ದೃಷ್ಟಿಯಿಂದ ಹಾಗೂ 20 ರಿಂದ 25 ಸಾವಿರಕ್ಕೂ ಹೆಚ್ಚು ಜನಸಂದಣಿ ಯಾಗುವ ಈ ಕಾರ್ಯಕ್ರಮದಲ್ಲಿ ಕಾನೂನು ವ್ಯವಸ್ಥೆ ಪಾಲನೆಯಾಗುವ ದೃಷ್ಟಿಯಿಂದ ಡಿಜೆ ಮತ್ತು ಇತರೆ ಹೆಚ್ಚಿನ ಶಬ್ದ ಬರುವಂತಹ ಹೆಚ್ಚಿನ ಡಿಸಿಬಲ್ ಇರುವಂತಹ ಯಾವುದೇ ಸಲಕರಣೆಗಳನ್ನು ಕಾರ್ಯಕ್ರಮದಲ್ಲಿ ನಿಷೇಧಿಸಲಾಗಿದೆ.
ಇದರ ಬದಲಾಗಿ ಸಂಸ್ಕೃತಿ ಸಂಪ್ರದಾಯಗಳನ್ನು ಸಾರುವಂತಹ ಈ ಬೃಹತ್ ಕಾರ್ಯಕ್ರಮದಲ್ಲಿ ಚಂಡೆ, ಮದ್ದಳೆ, ತಮಟೆ, ವೀಣೆ. ಶಹನಾಯಿ, ನಗಾರಿ, ಸ್ಥಳೀಯ ಬ್ಯಾಂಡುಗಳಂತಹ ಯಾವುದೇ ಭಾರತೀಯ ಸಂಸ್ಕೃತಿಯನ್ನು ಹೆಚ್ಚಿಗೆ ಪ್ರತಿನಿಧಿಸುವಂತಹ ವಾದ್ಯಗಳನ್ನು ಬಳಸುವ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರೆಗನ್ನು ತರಲು ಕೋರಿದ್ದಾರೆ.
ಇದಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು ವಿವಿಧ ಕನ್ನಡ ಪರ ಸಂಘಟನೆಗಳು, ಎಲ್ಲಾ ಪತ್ರಿಕಾ ಮಾಧ್ಯಮದವರು, ಕಾರ್ಮಿಕ ಸಂಘಟನೆಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಇನ್ನೊಮ್ಮೆ ಇದು ಕಟ್ಟುನಿಟ್ಟಿನ ಸೂಚನೆ. ಇದನ್ನು ಹೊರತುಪಡಿಸಿಯೂ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಮತ್ತು ಕಾನೂನುಬದ್ದವೂ ಆಗುತ್ತದೆಂದು ಹೇಳಿದ್ದಾರೆ.
ಹಿಂದೂಪರ ಸಂಘಟನೆಗಳೊಂದಿಗೆ ಸಭೆ
ನಾಳೆಯ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಕಚೇರಿಯಲ್ಲಿ ಹಿಂದೂಪರ ಸಂಘಟನೆಗಳೊಂದಿಗೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು, ಈ ವೇಳೆ ನಿನ್ನೆ ನಡೆದ ಬೈಕ್ ರ್ಯಾಲಿಯ ವೇಳೆ ಕೆಲ ಯುವಕರ ಅತಿರೇಖದ ವರ್ತನೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಜಿಲ್ಲಾಧಿಕಾರಿ ಆದೇಶದಂತೆ ಡಿಜೆ ಬಳಸದೆ ಶಾಂತಿಯುತ ಕಾರ್ಯಕ್ರಮ ನಡೆಸುವಂತೆ ಮನವಿ ಮಾಡಿದರು.

ಈ ವೇಳೆ ಹಿಂದೂಪರ ಕಾರ್ಯಕರ್ತರು 11 ವರ್ಷಗಳಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಶಾಂತಿಯುತವಾಗಿ ಮಾಡಲಾಗಿದ್ದು, ಅನುಮತಿ ನೀಡುವಂತೆ ಮನವಿ ಮಾಡಿದರು. ಆದರೆ ಜಿಲ್ಲಾಧಿಕಾರಿ ಆದೇಶವಾಗಿರುವ ಕಾರಣ ಅನುಮತಿ ನೀಡಲು ಸಾಧ್ಯವಿಲ್ಲ ಎಂದರು.
ಇದಕ್ಕೆ ಒಪ್ಪದ ಹಿಂದೂಪರ ಸಂಘಟನೆಗಳು ಡಿಜೆ ಬಳಸಲು ಅನುಮತಿ ನೀಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಪಟ್ಟು ಹಿಡಿದು ಕೂತಿದ್ದಾರೆ.

ಇನ್ನೂ ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮನವಿ ಮಾಡಿದ್ದು, ಇಲ್ಲವಾದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಹೇಳಿದ್ದಾರೆ.