ಬೆಂ.ಗ್ರಾ ಜಿಲ್ಲೆ: ಇತ್ತಿಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಜೊತೆಗೆ ಫೋಕ್ಸೋ (FOCSO) ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದು ಜಿಲ್ಲಾ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಸ್ ಸೋಮಶೇಖರ್ (Retired Judge S. Somashekar) ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ಗ್ರಾಮಾಂತರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ವತಿಯಿಂದ ಮಕ್ಕಳ ಹಕ್ಕುಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಕ್ಸೋ ಕಾಯ್ದೆ-2012 ರ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ವ್ಯಕ್ತಿಯನ್ನು ‘ಮಗು’ ಎಂದು ಪರಿಗಣಿಸಲಾಗುತ್ತದೆ. ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಮತ್ತು ಅಶ್ಲೀಲವಾಗಿ ವರ್ತಿಸುವುದು ಮಕ್ಕಳ ಹಕ್ಕುಗಳ ಕಾಯ್ದೆ ಪ್ರಕಾರ ಅಪರಾದ ವಾಗುತ್ತದೆ. ಮಕ್ಕಳ ಮೇಲೆ ಸುಮ್ಮನೆ ಮುಟ್ಟುವುದು, ಕೈ ಮಾಡುವುದು, ಅಶ್ಲೀಲಚಿತ್ರಗಳನ್ನ ತೋರಿಸುವುದು ಈ ರೀತಿಯಾಗಿ ಯಾರಾದರು ಅನುಚಿತವಾಗಿ ವರ್ತಿಸಿದರೆ ಅಂತಹವರ ವಿರುದ್ದ ಕ್ರಮ ಜರುಗಿಸಲಾಗುವುದು.
ಮಕ್ಕಳಿಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಕೊಡುವಂತಿಲ್ಲ. ಶಾಲೆಗಳಲ್ಲಿ ಮಕ್ಕಳ ಮೇಲೆ ಹಲ್ಲೆ, ನಿಂದನೆ, ಮಾನಸಿಕ ಹಿಂಸೆ ಇವೆಲ್ಲವೂ ಅಪರಾಧಗಳೇ. ಶಾಲಾ ಕಾಲೇಜು ಶಿಕ್ಷಕರು, ಆಡಳಿತ ಮಂಡಳಿ ಅಥವಾ ಇತರೆ ಸಿಬ್ಬಂದಿ ಮಕ್ಕಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುವುದು, ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಶಿಕ್ಷಣ ಸಂಸ್ಥೆಗಳಲ್ಲಿನ ಚಲನವಲನಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಕಾಲಕಾಲಕ್ಕೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಪೋಷಕರು ಕೂಡ ಮಕ್ಕಳ ಮೇಲೆ ಸದಾ ನಿಗಾ ಇರಲಿ ಎಂದರು.
ಶಿಕ್ಷಕರು ಮತ್ತು ಪೊಲೀಸ್ ಅಧಿಕಾರಿಗಳು ಚೈಲ್ಡ್ ಸೈಕಾಲಜಿ ಮತ್ತು ಚೈಲ್ಡ್ ಡೆವಲಪ್ಮೆಂಟ್ ಬಗ್ಗೆ ತಿಳಿದುಕೊಳ್ಳಬೇಕು. ಎಷ್ಟ್ಟೋ ಮಕ್ಕಳು ತಮ್ಮ ಭಾವನೆಗಳನ್ನ ಇತರರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಅದು ಅವರ ಬೆಳೆದ ವಾತಾವರಣ ಆಗಿರಬಹುದು ಅಥವಾ ಮನೆಯ ಸ್ಥಿತಿ ಆಗಿರಬಹುದು ಅದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಿರುತ್ತದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳ ಮನಸ್ಥಿಯನ್ನು ತಿಳಿದುಕೊಂಡು ಅದನ್ನ ಸರಿಪಡಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿಗಳು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಫೋಕ್ಸೊ ಕಾಯ್ದೆಯಡಿ 78 ಪ್ರಕರಣ ದಾಖಲಾಗಿದೆ, 30 ಬಾಲ್ಯ ವಿವಾಹ ಪ್ರಕರಣಗಳ ಪೈಕಿ 8 ಬಾಲ್ಯ ವಿವಾಹ ನಡೆದಿದ್ದು 22 ತಡೆಯಲಾಗಿದೆ, 8 ಪ್ರಕರಣಗಳ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಕ್ಕಳಿಗೆ ಪ್ರೀತಿ, ರಕ್ಷಣೆ ಹಾಗೂ ಶಿಕ್ಷಣ ನೀಡಿ ಅಗತ್ಯತೆ ಈಡೇರಿಸುವುದು ಸರ್ಕಾರ, ಸಮಾಜ ಹಾಗೂ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬಾಲಕಾರ್ಮಿಕ ಮಕ್ಕಳನ್ನು ದುಡಿಯುವ ಯಂತ್ರಗಳನ್ನಾಗಿ ಮಾಡಿಕೊಂಡು ಅವರ ಕನಸುಗಳನ್ನು ಛಿದ್ರ ಮಾಡುತ್ತಿದೆ. ಇದನ್ನೆಲ್ಲಾ ವಿರೋಧಿಸಿ ಮಕ್ಕಳನ್ನು ರಕ್ಷಿಸಿ ಬಾಲ್ಯಾವಸ್ಥೆಯಲ್ಲಿ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಮಕ್ಕಳ ಮೇಲಿನ ದೌರ್ಜನ್ಯಗಳು ಕಂಡು ಬಂದಲ್ಲಿ ದೂರವಾಣಿ ಸಂಖ್ಯೆ 112 ಅಥವಾ ಚೈಲ್ಡ್ ಲೈನ್ 1098 ಗೆ ಉಚಿತ ದೂರವಾಣಿ ಕರೆ ಮಾಡಿ ದೂರು ನೀಡಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ 0034 ಗೆ ಕರೆ ಮಾಡಿ ಮಕ್ಕಳ ರಕ್ಷಣೆಗೆ ಸಹಕಾರ ನೀಡಬಹುದಾಗಿದೆ.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧ್ಯಕ್ಷೆ ಚಿತ್ರಕಲಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ಲಕ್ಷ್ಮಿ, ಸಾಮಾಜ ಕಲ್ಯಾಣ ಉಪ ನಿರ್ದೇಶಕರು ಪ್ರೇಮ, ರೋಹಿತ್ ಸಿ.ಜಿ. ಪೊಲೀಸ್ ತರಬೇತುದಾರರು, ಎಸ್.ಜೆ.ಪಿ.ಯು-ಸಿ.ಐ.ಡಿ ಬೆಂಗಳೂರು, ಶಿಕ್ಷಣ ಇಲಾಖೆ ಅಧಿಕಾರಿ ಪದ್ಮವತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.