ದೊಡ್ಡಬಳ್ಳಾಪುರ: ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದ (Accident) ಪರಿಣಾಮ ಬೈಕ್ ಸವಾರ ಸಾವನಪ್ಪಿರುವ ಘಟನೆ ಹಿಂದೂಪುರ- ಬೆಂಗಳೂರು ನಡುವಿನ ರಾಜ್ಯ ಹೆದ್ದಾರಿ ದೊಡ್ಡಬಳ್ಳಾಪುರ ಎಪಿಎಂಸಿ ಮಾರುಕಟ್ಟೆ ಸಮೀಪ ಸಂಭವಿಸಿದೆ.

ಮೃತ ದುರ್ದೈವಿಯನ್ನು ಪಾಲನಜೋಗಿಹಳ್ಳಿ ನಿವಾಸಿ ಪುರುಷೋತ್ತಮ (29 ವರ್ಷ) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌರಿಬಿದನೂರು ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ಕೆಎಸ್‌ಆರ್ಟಿಸಿ ಬಸ್ ಹಾಗೂ ಬೈಕ್ ಸಾವರ ತೆರಳುತ್ತಿದ್ದು, ಬಸ್ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಹರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದ್ದು, ಈ ವ್ಯಾಪ್ತಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಾರ್ವಜನಿಕರ ಆಕ್ರೋಶ
ಇನ್ನೂ ಪ್ರವಾಸಿ ಮಂದಿರದಿಂದ ಪಾಲನಜೋಗಿಹಳ್ಳಿ ಕಡೆ ಸಾಗುವ ರಾಜ್ಯ ಹೆದ್ದಾರಿಯ ಎರಡು ಬದಿಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸುತ್ತಿರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹೆದ್ದಾರಿ ಸುಂಕ ವಸೂಲಿ ಮಾಡುವ ಟೋಲ್ ಸಂಸ್ಥೆ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಸದ ಕಾರಣ, ವಾಹನ ಸವಾರರು ಈ ರಸ್ತೆ ಎರಡೂ ಬದಿಗಳಲ್ಲಿ ಇರುವ ಅಂಗಡಿಗಳ ಬಳಿ ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿಯೇ ವಾಹನ ನಿಲ್ಲಿಸುತ್ತಿದ್ದು, ವಾಹನ ದಟ್ಟಣೆಯ ಜೊತೆ ಪದೇ ಪದೇ ಅಪಘಾತಗಳಿಗೆ ಕಾರಣವಾಗುತ್ತಿದೆ.
ಈ ಕುರಿತು ಟೋಲ್ ಸಿಬ್ಬಂದಿಗಳು ಹಾಗೂ ಪೊಲೀಸರು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.