ದೊಡ್ಡಬಳ್ಳಾಪುರ: ಎಸ್. ಪದ್ಮನಾಭ (S. Padmanabha) ಅವರು ನಗರಸಭೆ ಸದಸ್ಯತ್ವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡುವ ಮೂಲಕ ದೊಡ್ಡಬಳ್ಳಾಪುರ ಬಿಜೆಪಿಗೆ (Doddaballapur BJP) ಶಾಕ್ ನೀಡಿದ್ದಾರೆ ಎನ್ನಲಾಗುತ್ತಿರುವ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ಹರಿತಲೇಖನಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಎಸ್. ಪದ್ಮನಾಭ ಅವರ ಹೆಸರಿರುವ ರಾಜೀನಾಮೆ ನೀಡಿರುವ ಲೆಟರ್ ಹೆಡ್ ಲಭ್ಯವಾಗಿದೆ.
ಈ ರಾಜೀನಾಮೆ ಪತ್ರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಅವರಿಗೆ ಎಸ್. ಪದ್ಮನಾಭ ಆದ ನಾನು ದೊಡ್ಡಬಳ್ಳಾಪುರ ನಗರಸಭೆ 2ನೇ ವಾರ್ಡ್ ಬಸವೇಶ್ವರ ನಗರದ ನಗರಸಭಾ ಸದಸ್ಯತ್ವ ಸ್ಥಾನಕ್ಕೆ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದು, ಇದನ್ನು ಈ ಕೂಡಲೇ ಸ್ವೀಕರಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ಸಂಗ್ರಹಿಸಿದಾಗ ಇತ್ತೀಚಿನ ದಿನಗಳ ದೊಡ್ಡಬಳ್ಳಾಪುರ ಬಿಜೆಪಿಯಲ್ಲಿನ ಬೆಳವಣಿಗೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈ ಕುರಿತಂತೆ ವಾಸ್ತವ ಮಾಹಿತಿ ಪಡೆಯಲು ಎಸ್. ಪದ್ಮನಾಭ ಅವರನ್ನು ಹರಿತಲೇಖನಿ ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವ ಕಾರಣ ಅವರ ದಿಢೀರ್ ರಾಜೀನಾಮೆಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ.
ದೊಡ್ಡಬಳ್ಳಾಪುರ ನಗರಸಭೆ ಅಧಿಕಾರ ಅವಧಿ ಇನ್ನೂ 6 ತಿಂಗಳಿಗೂ ಬಾಕಿ ಇದ್ದು, ಇದರ ನಡುವೆ ಸರಳ, ಸಜ್ಜನ ವ್ಯಕ್ತಿತ್ವ ಹೊಂದಿರುವ ಪದ್ಮನಾಭ ಅವರು ನಗರಸಭೆ ಸದಸ್ಯತ್ವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿರುವುದು ರಾಜಕೀಯವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.