ದೊಡ್ಡಬಳ್ಳಾಪುರ: ಕೋವಿಡ್-19 ಮೂರನೇ ಅಲೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಾರಿಗೊಳಿಸಲಾದ “ಮಕ್ಕಳ ತಜ್ಞರ ನಡೆ ಹಳ್ಳಿಯ ಮಕ್ಕಳ ಕಡೆಗೆ” ಕಾರ್ಯಕ್ರಮ 28 ದಿನಗಳ ನಂತರ ಸಮಾರೋಪಗೊಂಡಿದೆ.
ಈ ತಂಡ ತಾಲೂಕಿನ ಗ್ರಾಮಗಳಿಗೆ ತೆರಳಿಗೆ 31233 ಮಕ್ಕಳನ್ನು ತಪಾಸಣೆ ನಡೆಸಿದ್ದು, ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಕಿಟ್ ವಿತರಿಸಿದೆ.
ಮಂಗಳವಾರ ನಗರದ ಕೋವಿಡ್ ವಾರ್ ರೂಂ ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾದ ವೈದ್ಯಕೀಯ ತಂಡಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಪ್ರಶಂಸೆ ಪತ್ರ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು,ತಾಲ್ಲೂಕಿನಲ್ಲಿ ಮಕ್ಕಳ ತಪಾಸಣೆ ಮಾಡಿ ಅವರ ಸ್ಥಿತಿಗತಿಯ ಬಗ್ಗೆ ವರದಿ ನೀಡಿದ್ದರಿಂದ ಮುಂದಿನ ಕ್ರಮ ವಹಿಸಲು ಅನುಕೂಲವಾಗಲಿದೆ. ಗುರುತಿಸಲಾದ ಅಪೌಷ್ಟಿಕ ಮಕ್ಕಳನ್ನು ಸ್ಥಳೀಯ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳ ಮೂಲಕ ಅನುಪಾಲನೆ ಮಾಡಲು ಸೂಚಿಸಿದರು. ಅಲ್ಲದೆ ಹೃದಯ ಸಂಬಂಧಿ, ಕಿಡ್ನಿ ಸಂಬಂಧಿತ ಹಾಗೂ ಇತರೆ ಖಾಯಿಲೆಗಳ ಹೆಚ್ಚಿನ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಕೊಡಿಸಲು ಬೆಂಗಳೂರಿನ ಆಸ್ಪತ್ರೆಗಳಿಂದ ವಿಶೇಷ ತಜ್ಞರ ಶಿಬಿರ ಆಯೋಜಿಸಲು ಸೂಚಿಸಿದರು. ವೈದ್ಯರು, ಸಿಬ್ಬಂದಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ನಿರ್ಭಯವಾಗಿ ಕೆಲಸ ಮಾಡುವಂತೆ ಸೂಚಿಸಿದರು.
ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ಕೋವಿಡ್ ಸಂದರ್ಭವು ನಮಗೆ ಜೀವನದ ವಾಸ್ತವತೆಯ ಅರಿವು ಮೂಡಿಸಿದೆ. ವಚನದಲ್ಲಿ ಹೇಳಿರುವಂತೆ ಕಾಲಿಗೆ ಗುಂಡು ಕತ್ತಿಗೆ ಬೆಂಡು ಕಟ್ಟಿದಂತೆ, ಗುಂಡು ಮುಳುಗಿಸುತ್ತಿರುತ್ತದೆ.. ಬೆಂಡು ತೇಲಿಸುತ್ತಿರುತ್ತದೆ.. ಕೋವಿಡ್ ನಲ್ಲಿ ಜನ ಜೀವನ ಇತ್ತ ಮುಳುಗದೆ, ಅತ್ತ ಏಳದೆ ಸಂದಿಗ್ದ ಪರಿಸ್ಥಿತಿಯನ್ನು ನಮಗೆಲ್ಲರಿಗೂ ತಂದೊಡ್ಡಿದೆ. ಕೋವಿಡ್ ನಿರ್ವಹಣೆಯಲ್ಲಿ ಶಾಸಕರ ಸಹಕಾರ ಮಾರ್ಗದರ್ಶನ ಅಪಾರವಾಗಿದ್ದು, ಯೋಜನೆಯಲ್ಲಿ ಪಾಲ್ಗೊಂಡ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳ ಪಾತ್ರ ಪ್ರಶಂಸನೀಯ ಎಂದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..