ದೊಡ್ಡಬಳ್ಳಾಪುರ: ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿ ಕಾನೂನು ಮಹಾವಿದ್ಯಾಲಯದಿಂದ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲೂಕಿನ ಕಾಡತಿಪೂರು, ಹುಲಿಕುಂಟೆ ದೊಡ್ಡಬೆಳವಂಗಲ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಾನೂನು ನೆರವು ಅಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಕ್ಕಳ ಶಿಕ್ಷಣ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ಬಾಲಕಾರ್ಮಿಕರ ಕಾಯ್ದೆ, ಫೋಕ್ಸೋ ಕಾನೂನು ವಿಚಾರವಾಗಿ ಅರಿವು ಮೂಡಿಸಲಾಯಿತು.
ಕ್ರೈಸ್ಟ್ ಅಕಾಡೆಮಿ ಕಾನೂನು ಮಹಾವಿದ್ಯಾಲಯ ಶಿಕ್ಷಣ ಸಂಚಾಲಕ ಪ್ರಿಯಂಕ್ ಜಾಗವಂಶಿ ಮಾತನಾಡಿ, ದೇಶದ ನಾಳಿನ ಭವಿಷ್ಯವಾಗಿರುವ ಶಾಲೆ-ಕಾಲೇಜು ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಮುಖ್ಯವಾಗಿದೆ.
ವಿದ್ಯಾರ್ಥಿಗಳು ಮೋಟಾರ್ ಆ್ಯಕ್ಟ್ ಕುರಿತು ತಿಳಿದುಕೊಳ್ಳಬೇಕು. ಅದೇ ರೀತಿ ಮೂಲ ಹಕ್ಕುಗಳ ಬಗ್ಗೆಯೂ ಮಾಹಿತಿ ಹೊಂದಿರಬೇಕು. ಪ್ರಮುಖವಾಗಿ ಕಾನೂನನ್ನು ಯಾವ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಬಾರದು ಎಂದರು.
ಫೋಕ್ಸೋ ಕಾಯ್ದೆ ಮಹಿಳೆಯರು, ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವುದಾಗಿದೆ. ಈ ಕಾಯ್ದೆ ಅತ್ಯಂತ ಬಲಿಷ್ಠವಾಗಿದ್ದು, ಆರೋಪಿಗಳಿಗೆ ಯಾವ ರೀತಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ವಿದ್ಯಾರ್ಥಿ ಸಂಚಾಲಕ ಸುದರ್ಶನ್, ಸಹಚಾಲಕರಾದ ವರಣ್, ಚೇತನ್, ಸದಸ್ಯರಾದ ಸುಪ್ರೀತ್, ಮೇಘನಾ, ಅಮಲ್, ರೇಷ್ಮ, ರಜಿಕಾ, ಐಶ್ವರ್ಯ, ಅಂಜಲಿ, ದಿಯಾ, ವಿಘ್ನೇಶ್, ಅರ್ಜುನ್ ಸೇರಿದಂತೆ ಮೂರು ಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.