ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಜನತೆಯ ಪಾಡು ಅಡಕತ್ತರಿಯಲ್ಲಿ ಸಿಲುಕಿದ ಹಾಗೆ ಆಗಿರುವುದಂತೂ ಸುಳ್ಳಲ್ಲ..ಇದಕ್ಕೆ ಕಾರಣವೂ ಇಲ್ಲದಿಲ್ಲ. ಬೆಲೆಯೇರಿಕೆ ಎಂಬ ಪೆಡಂಭೂತ ಶ್ರೀಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ.
ಈ ಕುರಿತು ನಿಷ್ಪಕ್ಷಪಾತವಾಗಿ ಅವಲೋಕಿಸುವುದಾದರೆ, ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಪ್ರಸ್ತುತದಷ್ಟೇ ಇದ್ದರೂ ಸಹ (ಪ್ರಸ್ತುತ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡಿತ್ತು) ಪ್ರಸ್ತುತ ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಫೆಬ್ರವರಿ 2020 ಕ್ಕೆ ಹೋಲಿಸಿದರೆ ಶೇಕಡಾ 50 ರಷ್ಟು ಏರಿಕೆಯಾಗಿದೆ. ಹಾಗಾಗಿ ಈಗಿನ ಸರ್ಕಾರವಾಗಲೀ, ಆಡಳಿತ ಪಕ್ಷದ ಸಮರ್ಥಕರಾಗಲೀ ಬೆಲೆಯೇರಿಕೆ ನಿಯಂತ್ರಣದ ವಿಚಾರದಲ್ಲಿ ಹಿಂದಿನ ಯುಪಿಎ ಸರ್ಕಾರವನ್ನು ಟೀಕಿಸಿ, ಈಗಿನ ಸರ್ಕಾರದ “ಜಾಣಮೌನ”ವನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ.
ಬೆಲೆಯೇರಿಕೆ ಬಗ್ಗೆ ಸರ್ಕಾರ “ಕರೊನಾ ಸಂಬಂಧಿತ” ಯಾವುದೇ ಕಾರಣ ಕೊಟ್ಟರೂ ಸಹ ಅದು ಸಮರ್ಪಕ ಎನಿಸುವುದಿಲ್ಲ. ಕಾರಣ ಈಗಾಗಲೇ ನಮ್ಮ ದೇಶ ಕರೊನಾ ಸಂಕಷ್ಟವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಸಹಜ ಜೀವನಕ್ಕೆ ಮರಳಿ ನಾಲ್ಕೈದು ತಿಂಗಳುಗಳೇ ಕಳೆದಿವೆ.
ಅನನುಭವಿ ವಿತ್ತ ಸಚಿವರ ಕೆಲವು ತಪ್ಪು ನಿರ್ಣಯಗಳ ಫಲವಾಗಿ ಇಂದು ಭಾರತದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನಜೀವನ ಹಳಿ ತಪ್ಪಿದೆ ಎಂಬ ಆರೋಪ ವ್ಯಾಪಕವಾಗಿದೆ.
ಮೂಲ ಬೆಲೆಗಳಿಗಿಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವೈಜ್ಞಾನಿಕ ತೆರಿಗೆಗಳೇ ಹೆಚ್ಚುವರಿಯಾಗಿವೆ. ಕೇಂದ್ರ ಸರ್ಕಾರವು ಈಗಲಾದರೂ ಸಾರ್ವಜನಿಕರ ಬಹುಬೇಡಿಕೆಯ “ಬೆಲೆ ನಿಯಂತ್ರಣ ಪ್ರಾಧಿಕಾರ”ವನ್ನು ಅನುಷ್ಠಾನಕ್ಕೆ ತಂದು ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗಮನವಹಿಸುವುದು ಸೂಕ್ತ. ಅದಕ್ಕಿಂತ ಮೊದಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನಗಳ ಮೇಲಿನ ತೆರಿಗೆಗಳನ್ನು ತಗ್ಗಿಸಿ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿದರೆ ದೇಶದ ಜನತೆ ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಡುತ್ತಾನೆ. ಇಲ್ಲವಾದಲ್ಲಿ ಈರುಳ್ಳಿ ಬೆಲೆ ಏರಿಕೆಯಿಂದಾಗಿ ಈಗಾಗಲೆ ಪೆಟ್ಟು ತಿಂದ ಅನುಭವ ಇರುವ ಸರ್ಕಾರ ಮತ್ತೆ ಎಡವಿದರೆ..ಮುಂದಾಗಲಿರುವ ಪರಿಣಾಮ ಎದುರಿಸಬೇಕಾಗುತ್ತದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ, ಕೂ,ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….