ದೊಡ್ಡಬಳ್ಳಾಪುರ: ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ರೂಪಿಸಿದ್ದ ಕೃಷಿ ಇಂದು ಆಪತ್ತಿನಲ್ಲಿದೆ.ಇಡೀ ದೇಶವನ್ನು ಉದ್ದುದ್ದವಾಗಿ ಪೂರ್ವ ಭಾರತ ಮತ್ತು ಪಶ್ಚಿಮ ಭಾರತ ಎಂದು ವಿಂಗಡಿಸಿದರೆ ಪಶ್ಚಿಮ ಭಾರತದಲ್ಲಿ ಕೃಷಿ ಸಮೃದ್ಧವಾಗಿದೆ. ಆದರೆ ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಪೂರ್ವ ಭಾರತದ ಪ್ರಾಭಲ್ಯ ಹೆಚ್ಚಾಗಿದೆ ಎಂದು ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ ಮಂಜುನಾಥ ಎಂ.ಅದ್ದೆ ಹೇಳಿದರು.
ಅವರು ನಗರದ ಬಸವ ಭವನದಲ್ಲಿ ನಡೆದ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಆರ್ಥಿಕತೆ ಕುರಿತು ಮಾತನಾಡಿದರು.
ಬೆವರು ಬಸಿಯುವವರಿಗೆ ನಷ್ಟ. ಮೌಲ್ಯ ವರ್ಧನೆ ಮಾಡಿ ಮಾರಾಟ ಮಾಡುವವರಿಗೆ ಜೇಬು ತುಂಬ ಕಾಸು. ಕೃಷಿ ನಾಶವಾದರೆ ಸಮಾನತೆಯೂ ನಾಶವಾಗುತ್ತದೆ.ಕೃಷಿ ಉತ್ಪನ್ನಗಳ ಬೆಲೆಯನ್ನು ಪ್ರಸ್ತಾಪಿಸಿದ ಅವರು,ರಾಗಿ- ಜೋಳಕ್ಕೆ 20-30 ವರ್ಷಗಳ ಹಿಂದೆ ಇದ್ದ ಬೆಲೆ ಈಗಲೂ ಇದೆ. ಅಲ್ಪಸ್ವಲ್ಪ ಮಾತ್ರ ಬದಲಾವಣೆಯಾಗಿದೆ. ಇತರ ಉತ್ಪನ್ನಗಳಿಗೆ ಹೋಲಿಸಿದರೆ ಇವುಗಳ ಬೆಂಬಲ ಬೆಲೆ ಏನೇನೂ ಅಲ್ಲ.
ಐವತ್ತು ವರ್ಷಗಳ ಕಾಲ ಉಪ್ಪಿನ ಬೆಲೆ ₹1 ರಿಂದ 2 ಮೀರಿರಲಿಲ್ಲ. ಆದರೆ ಕಾರ್ಪೂರೆಟ್ ಕಂಪನಿಗಳ ಪ್ರವೇಶವಾಗಿದ್ದೇ ತಡ ಅವು ಹಲವು ಮಿತ್ಗಳನ್ನು ಹಬ್ಬಿಸಿದವು. ಆಯೋಡಿನ್ಯುಕ್ತ ಉಪ್ಪು ಅಲ್ಲದಿದ್ದರೆ ಜೀವವೇ ಹೋಗಿಬಿಡುತ್ತದೆ ಎಂದು ನಂಬಿಸಿದವು. ಈಗ ಒಂದು ಕೆ.ಜಿ. ಉಪ್ಪು ₹25 ರಿಂದ30 ಆಗುತ್ತಿದೆ. ಕೇಂದ್ರ ತಂದಿರುವ ಕೃಷಿ ಕಾಯಿದೆಗಳು ಭಾರತದ ಕೃಷಿಯ ಬಹುತ್ವವನ್ನೇ ನಾಶ ಮಾಡುತ್ತದೆ. ತಾತ್ಕಾಲಿಕ ಲಾಭದ ಆಸೆ ತೋರಿಸುವ ಕಂಪನಿಗಳು ಆನಂತರ ಕೃಷಿಕರನ್ನು ತಬ್ಬಲಿಗಳನ್ನಾಗಿಸುತ್ತವೆ. ಈ ಕುರಿತು ಎಲ್ಲರೂ ಜಾಗೃತರಾಗಬೇಕು ಎಂದರು.
‘ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ, ಟಾಟಾ ಬಿರ್ಲಾರ ಜೇಬಿಗೆ ಬಂತು’ ಎಂದು ಸಿದ್ದಲಿಂಗಯ್ಯ ಕವಿತೆ ಬರೆದರು. ಅವರಾದರೋ ಬೃಹತ್ ಉದ್ಯಮಗಳನ್ನು ಸ್ಥಾಪಿಸಿದರು. ಹಲವು ವಿಷಯಗಳಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ನೆರವಾದರು. ಆದರೆ ಇವತ್ತಿನ ಉದ್ಯಮಿಗಳು ಚಪ್ಪಲಿ, ತರಕಾರಿ, ಹಪ್ಪಳ, ಸಂಡಿಗೆ, ಪಾಪ್ಕಾರ್ನ್ಗೂ ಕೈ ಇಟ್ಟು ಗೃಹೋದ್ಯಮವನ್ನೇ ನಾಶ ಮಾಡಿದ್ದಾರೆ. ಇಡೀ ದೇಶದಲ್ಲಿ ಕೆಲವೇ ಉದ್ಯಮಿಗಳು ಮಾತ್ರ ವರ್ಷಕ್ಕೆ ನೂರಾರು ಪಟ್ಟು ಆದಾಯಗಳಿಸುತ್ತಿದ್ದಾರೆ. ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ ಎಂದರು.
ನಗರದ ನೇಕಾರಿಕೆ ಕುರಿತು ಮಾತನಾಡಿದ ಸಮ್ಮೇಳನದ ಸರ್ವಾಧ್ಯಕ್ಷ ಟಿ.ಎನ್.ಪ್ರಭುದೇವ, ಪುರಾತನ ಕಾಲದಿಂದಲೂ ನಮ್ಮ ನಗರವು ನೇಕಾರಿಕೆಗೆ ತುಂಬಾ ಹೆಸರು ಮಾಡಿದ್ದು, ರೇಷ್ಮೆ ನಗರ ಎಂದೇ ಪ್ರಸಿದ್ದಿ ಪಡೆದಿದೆ, ಕರೊನಾ ಮಹಾಮಾರಿಯಿಂದ ನೇಕಾರಿಕೆಯ ಬದುಕು ನೆಲಕಚ್ಚಿದ್ದು, ನೇಯ್ಗೆ ಮಾಡುವ ಕುಟುಂಬಗಳ ಪರಿಸ್ಥಿತಿ ತುಂಬಾ ಅಸ್ತವ್ಯಸ್ತವಾಗಿದ್ದು ಈಗ ಚೇತರಿಸಿಕೊಳ್ಳುವ ಸಮಯ ಒದಗಿ ಬಂದರು ಬೆಲೆಯೇರಿಕೆ ಬರೆ ಮತ್ತೆ ಎಡೆಬಿಡದೆ ಕಾಡುತ್ತಿದೆ ಎಂದರು.
ತಾಲೂಕಿನ ಹಲವಾರು ಹಳ್ಳಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದ್ದು ನೀರಾವರಿ ಹೋಗಲಿ ಕುಡಿಯಲು ಸಹ ಬೇಸಿಗೆಯ ಸಮಯದಲ್ಲಿ ಪರದಾಡುವ ಸಮಸ್ಯೆ ಇದ್ದು ತಾಲೂಕಿಗೆ ಶಾಶ್ವತ ನೀರಾವರಿಯ ಅವಶ್ಯಕತೆ ಇದೆ, ಎತ್ತಿನಹೊಳೆ, ಜಕ್ಕಲುಮಡಗು ಹಾಗೂ ಇನ್ನಿತರ ನೀರಾವರಿ ಮೂಲಗಳಿಂದ ಸ್ವಲ್ಪವಾದರೂ ಚೇತರಿಸಿಕೊಳ್ಳುವ ನೀರೀಕ್ಷೆ ನಮ್ಮ ಬಯಲು ಸೀಮೆಗೆ ಒದಗಿಬರಲಿ, ರೈತ ವಿರೋಧಿನೀತಿಗಳನ್ನು ಸರ್ಕಾರ ಹಿಂಪಡೆದು ರೈತರ ಬಾಳು ಹಸನಾಗಿಸಲಿ ಎಂದರು,
ಸಮ್ಮೆಳನದಲ್ಲಿ ಮೊದಲಿಗೆ ಕೃಷಿ, ನೀರಾವರಿ, ನೇಕಾರಿಕೆ ಕುರಿತು ವಿಚಾರಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಅಧಿವೇಶನ, ಕವಿ ಗೋಷ್ಠಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಮಹದೇವ, ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಡಿ.ವಿ.ಅಶ್ವಥಪ್ಪ, ರಾಜ್ಯ ರೈತ ಸಂಘದ ಮುಖಂಡರಾದ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಶಾಶ್ವತ ನೀರಾವತರಿ ಹೋರಾಟ ಸಮಿತಿ ಮುಖಂಡ ಆಂಜಿನೇಯರೆಡ್ಡಿ ಮತ್ತಿತರರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.