ಚಿಕ್ಕಬಳ್ಳಾಪುರ: ಪ್ಲಾಸ್ಟಿಕ್ ಬಿಂದಿಗೆ ಮಾರೋ ನೆಪದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರ ಮೂಲದ ವೆಂಕಟರಮಣಪ್ಪ, ಪ್ರಕಾಶ್ ಬಂಧಿತರು. ದಿಬ್ಬೂರಹಳ್ಳಿ ಬಳಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದ ಆರೋಪಿಗಳು. ಮೂರು ಚಕ್ರದ ಅಪೇ ಗೂಡ್ಸ್ ವಾಹನದ ತುಂಬ ಪ್ಲಾಸ್ಟಿಕ್ ಬಿಂದಿಗೆ ಹಾಗೂ ಸಿಲ್ವರ್ ಆಡುಗೆ ಸಾಮಾನುಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು. ಆದರೆ ಅವರು ಪ್ಲಾಸ್ಟಿಕ್ ಬಿಂದಿಗೆ ಹೆಸರಿನಲ್ಲಿ ಗಾಂಜಾ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.
ನೆರೆಯ ಆಂಧ್ರದಿಂದ ಗಾಂಜಾ ತಂದು ಅದನ್ನು ಇಲ್ಲಿಂದ ಬೇರೆ ಕಡೆಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿಡ್ಲಘಟ್ಟ ಸಿಪಿಐ ಸುರೇಶ್ ಮತ್ತವರ ತಂಡ ವಾಹನ ಸಮೇತ 34 ಲಕ್ಷ ರೂ. ಮೌಲ್ಯದ 17 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…