ದೊಡ್ಡಬಳ್ಳಾಪುರ: ನಗರದ ಬಯಲು ಬಸವಣ್ಣ ದೇವಾಲಯ ಸಮೀಪ ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದ ವರ್ತಕರಿಂದ ಸುಂಕ ವಸೂಲಿ ಮಾಡುವುದನ್ನು ನಿಲ್ಲಿಸುವಂತೆ ಬುಧವಾರ ಬೀದಿ ಬದಿ ವ್ಯಾಪಾರಿಗಳು ದಿಡೀರ್ ಪ್ರತಿಭಟಿಸಿ ರಸ್ತೆ ತಡೆದರು. ಇದರಿಂದಾಗಿ ಕೆಲ ಸಮಯ ಗೊಂದಲಮಯ ವಾತಾರಣ ಉಂಟಾಗಿತ್ತು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವರ್ತಕರ ಮನವೊಲಿಸಿ ಸುಂಕ ವಸೂಲಿ ತಡೆ ಕುರಿತಂತೆ ಸಭೆ ನಡೆಸುವ ಬಗ್ಗೆ ಭರವಸೆ ನೀಡಿದರು.
ಲಾಕ್‍ಡೌನ್ ಜಾರಿಯಿಂದಾಗಿ ಹಣ್ಣು ತರಕಾರಿ ಸೇರಿದಂತೆ ಇತರೆ ಎಲ್ಲಾ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ನಗರದ ಮಾರುಕಟ್ಟೆಯಷ್ಟೇ ಅಲ್ಲದೆ ವಿವಿಧ ಪ್ರದೇಶಗಳಲ್ಲಿ ಹಣ್ಣು ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಲಾಕ್ ಡೌನ್ ನಿಂದಾಗಿ ವ್ಯಾಪಾರವು ಕುಸಿತವಾಗಿದೆ. ದಿನವಿಡೀ ವ್ಯಾಪಾರ ಮಾಡಲು ಅವಕಾಶ ಇಲ್ಲ. ಇಂತಹ ಸಂದರ್ಭದಲ್ಲಿ ನಗರಸಭೆಯವರು ಸುಂಕವಸೂಲಿ ಮಾಡುವ ಕ್ರಮ ಎಷ್ಟರಮಟ್ಟಿಗೆ ಸರಿ ಎಂದು ವ್ಯಾಪಾರಿಗಳು ಪ್ರಶ್ನಿಸಿದರು.
ಲಾಕ್‍ಡೌನ್ ತೆರವಾಗಿ ಜನ ಜೀವನ ಸಹಜ ಸ್ಥಿತಿಗೆ ಬರುವವರೆಗೂ ಬೀದಿ ಬದಿಯಲ್ಲಿ ಸುಂಕು ವಸೂಲಿ ಮಾಡುವುದನ್ನು ಸ್ಥಗಿತಗೊಳಿಸುವಂತೆ ಶಾಸಕ ಟಿ.ವೆಂಕಟರಮಣಯ್ಯ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ. ಅವರು ಈ ಬಗ್ಗೆ ಮಾಹಿತಿ ನೀಡಿ, ನಗರಸಭೆ ವ್ಯಾಪ್ತಿಯಲ್ಲಿ ಸುಂಕವಸೂಲಿ ಮಾಡುವುದನ್ನು ವಾರ್ಷಿಕ ಗುತ್ತಿಗೆ ನೀಡಲಾಗುತ್ತದೆ. ಇದರಿಂದಾಗಿ ಗುತ್ತಿಗೆ ನಿಯಮದಂತೆ ನಗರಸಭೆಗೆ ಹಣ ಪಾವತಿ ಮಾಡಲೇಬೇಕಾಗಿದೆ. ಹೀಗಾಗಿ ಎರಡು ತಿಂಗಳ ಮಟ್ಟಿಗೆ ಸುಂಕ ವಸೂಲಿ ಗುತ್ತಿಗೆದಾರರಿಗೆ ರಿಯಾಯಿತಿ ನೀಡುವಂತೆ ತಿಳಿಸಲಾಗಿದೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….