ಅಪ್ಪ – ಎಲ್ಲ ಮಕ್ಕಳ ಪಾಲಿನ ಮೊದಲ ಸೂಪರ್ ಹೀರೋ. ಅದರಲ್ಲೂ ಹೆಣ್ಣು ಮಕ್ಕಳ ಪಾಲಿಗಂತೂ ಆತ ಯಾವಾಗಲೂ ಪ್ರಥಮ ಪ್ರೀತಿಯಾಗಿರುತ್ತಾನೆ. ಅಪ್ಪ ಅನ್ನುವ ಬಂಧವೇ ಅಂಥದ್ದು. ಅಪ್ಪ ಅಂದರೆ ಕೆಲವರಿಗೆ ಸಿಡುಕು, ಗಂಭೀರ ಮುಖವೊಂದು ನೆನಪಾಗಬಹುದು, ಹಾಗೆಯೇ ಹೆಗಲಿಗೇರಿಸಿಕೊಂಡು ನಡೆದ ಜೀವವೊಂದು ಕಣ್ಣ ಮುಂದೆ ಸುಳಿದು ಹೋಗಬಹುದು. ಚಿಕ್ಕಂದಿನಲ್ಲಿ ಶಿಕ್ಷೆ ಕೊಡುವ, ಗದರುವ ಅಪ್ಪ , ಬೆಳೆಯುತ್ತಿದ್ದಂತೆ ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯುವ ಸ್ನೇಹಿತನಾಗುತ್ತಾನೆ.
ಅಮ್ಮ ಎನ್ನುವ ದೇವತೆ ಹೊತ್ತು, ಹೆತ್ತು ಹಾಲನ್ನಿತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಮಗುವಿಗೆ ಬಲ ತುಂಬುತ್ತದೆ, ರಕ್ಷಣೆ ಒದಗಿಸುತ್ತದೆ. ಮೌನವಾಗಿಯೇ ನಮ್ಮೆಲ್ಲ ಜವಾಬ್ದಾರಿಯನ್ನು ಹೊರುವ ಅಪ್ಪ ಮಳೆ, ಚಳಿ, ಗಾಳಿ ಎನ್ನದೇ ನಮಗಾಗಿ ಬೆವರು ಸುರಿಸುತ್ತಾನೆ. ನಿದ್ದೆಗೆಡುತ್ತಾನೆ. ನಿಮಗಾಗಿ ಬದುಕು ತೆತ್ತೆ ಎನ್ನದ ಅಪ್ಪ ಸದಾ ನಮಗಾಗಿಯೇ ಹೆಣಗಾಡುತ್ತಾನೆ.
ಬದುಕಿಗೆ ಅರ್ಥ, ಸಮಾಜದಲ್ಲಿ ಅಸ್ತಿತ್ವವನ್ನು ಒದಗಿಸಿಕೊಟ್ಟವರು ಅಪ್ಪ. ಈ ಅಪ್ಪ ಎಂಬ ಅಪರೂಪದ ಮನುಷ್ಯ ಅಮ್ಮನಂತೆ ಸಲುಗೆಯಿಂದ ಇರುವುದು ಕಡಿಮೆ. ಹೀಗಾಗಿ ಅಪ್ಪನಿಗೆ ಸಲ್ಲಬೇಕಾದ ಪ್ರೀತಿಯ ಪಾಲು ಕೂಡ ಅಮ್ಮನತ್ತವೇ ಹರಿದು ಬಿಡುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಶಿಸ್ತಿನ ಸಿಪಾಯಿಯ ಪಾತ್ರ ನಿರ್ವಹಿಸುವ ಆತ ಜೀವನದುದ್ದಕ್ಕೂ ಕೊಂಚ ಗಡುಸಾಗಿಯೇ ಕಾಣಿಸಿಕೊಳ್ಳುತ್ತಾನೆ. ಆದರೆ ಅವನಲ್ಲಿಯೂ ಆಕಾಶದಷ್ಟು ಪ್ರೀತಿ, ವಾತ್ಸಲ್ಯ, ಮಮತೆಯಿರುತ್ತದೆ. ಅವುಗಳನ್ನು ನಮ್ಮ ಮೂಲಕ ನನಸು ಮಾಡಿಕೊಳ್ಳುವ ಪ್ರಯತ್ನ ಆತನನ್ನು ಕೊಂಚ ಕಠಿನನನ್ನಾಗಿ ಮಾಡುತ್ತದೆ.
ಅಮ್ಮ ಎಂಬ ಪದಕ್ಕಿರುವಷ್ಟೇ ಅನಂತ ವಿಸ್ತಾರ ಅಪ್ಪನೆಂಬ ಪದಕ್ಕೂ ಇದೆ. ಅಪ್ಪನೆಂದರೆ ವಿಶ್ವಾಸ, ಭರವಸೆ. ಜೀವ ಕೊಟ್ಟು, ಜೀವನ ರೂಪಿಸಿದ ಅಪ್ಪ – ಅಮ್ಮಂದಿರ ದಿನ ಒಂದು ದಿನಕ್ಕೆ ಸೀಮಿತವಲ್ಲ. ಈ ಜಗತ್ತು ನಡೆಯುತ್ತಿರುವುದೇ ಅವರಿಂದ. ಆದರೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮಲ್ಲಿ ಕೂಡ ಕೆಲ ವರ್ಷಗಳಿಂದ ಅಮ್ಮಂದಿರ ದಿನದಂತೆ, ಅಪ್ಪಂದಿರ ದಿನ ಕೂಡ ಪ್ರಚಲಿತಕ್ಕೆ ಬರುತ್ತಿದೆ. ತಂದೆ -ತಾಯಿ ಎಂದರೆ ದೇವರೆಂದು ಪೂಜಿಸುವ ನಮ್ಮ ದೇಶದಲ್ಲಿ ವರ್ಷಗಳು ಕಳೆದಂತೆ ಈ ದಿನ ಮಹತ್ವ ಪಡೆಯುತ್ತಲೇ ಸಾಗಿದೆ.
ರಾಷ್ಟ್ರೀಯ ತಂದೆಯಂದಿರ ದಿನಾಚರಣೆ ಸಮಿತಿಯ ಅನ್ವಯ 1910ರಲ್ಲಿ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯಂದಿರ ದಿನಾಚರಣೆ ಪ್ರಾರಂಭಿಸಿದ್ದು, ಪ್ರತಿವರ್ಷ ಜೂನ್ ತಿಂಗಳ ಮೂರನೇ ಭಾನುವಾರವನ್ನು “ವಿಶ್ವ ಅಪ್ಪಂದಿರ ದಿನ’ ಎಂದು ಆಚರಿಸಲಾಗುತ್ತದೆ. ಈ ದಿನ ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಎಲ್ಲವನ್ನೂ ಸ್ಮರಿಸುತ್ತಾ ಆತನಿಗೆ ಅಭಿನಂದನೆ ಮತ್ತು ಗೌರವ ಸಲ್ಲಿಸಲಾಗುತ್ತದೆ.
ಬದುಕು ರೂಪಿಸಿದ, ಜೀವನ ಪಾಠ ಕಲಿಸಿದ, ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನವಿದು.(ಸಂಗ್ರಹ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..