ಬೆಂಗಳೂರು: ಕಾರ್ಗಿಲ್ ಯುದ್ಧ ನಡೆಯುತ್ತಾ 5 ವಾರಗಳಾಗಿತ್ತು. ಆದರೂ ಹೆಚ್ಚಿನ ಯಶಸ್ಸು ಸಾಧಿಸಿರಲಿಲ್ಲ. ಪ್ರಧಾನಿಗಳ ಭೇಟಿ ಸೈನಿಕರಲ್ಲಿ ಆತ್ಮವಿಶ್ವಾಸ ಮತ್ತು ಮನೋಬಲವನ್ನು ಇಮ್ಮಡಿಗೊಳಿಸಿತ್ತು.
ಭಾರತ ಈಗ ಮಹತ್ತರ ಸಾಧನೆಯೊಂದಕ್ಕೆ ಇಳಿದಿತ್ತು. ಅದು 17 ಸಾವಿರ ಎತ್ತರದ ಶಿಖರವನ್ನು ವಿಮೋಚನಗೊಳಿಸಬೇಕಿದ್ದ ಸಾಹಸ. ಅದೇನು ಅಷ್ಟು ಸುಲಭದ ವಿಷಯವಲ್ಲ. ಇನ್ನೇನು ಸೂರ್ಯರಶ್ಮಿ ಹಿಮಾಲಯದ ಎತ್ತರದಲ್ಲಿರುವ ಶಿಖರದ ತುದಿಗೆ ಮೊದಲ ಬೆಳಕು ಚೆಲ್ಲಲು ಕೆಲವೇ ಘಂಟೆಗಳು ಬಾಕಿ ಉಳಿದಿತ್ತು. ಬೆಳಗಾದರೆ ಶಿಖರವೇರಲು ಸಾಧ್ಯವಿರಲಿಲ್ಲ. ಶತ್ರುವಿನ ಗುಂಡಿಗೆ ಎದೆಗೊಡಬೇಕಾಗಿತ್ತು. ಇಂತಹ ಶಿಖರವನ್ನು ಜಯಿಸಲೇಬೇಕೆಂದು ನಮ್ಮ ಸೈನಿಕರಿಗೆ ಆದೇಶ ನೀಡಲಾಗಿತ್ತು. ಅದು ದೇಶದ ಘನತೆಯ ಪ್ರಶ್ನೆಯೂ ಆಗಿತ್ತು.
ಇಂತಹ ಮಹತ್ತರ ಕಾರ್ಯಕ್ಕೆ ಸಿದ್ಧರಾದವರು ಮೇಜರ್ ಮನೋಜ್ ಕುಮಾರ್ ಪಾಂಡೆ ಮತ್ತು ಅವನ ಸಂಗಡಿಗರು.
ಮೇಜರ್ ಮನೋಜ್ ಕುಮಾರ್ ಪಾಂಡೆ ಉತ್ತರ ಪ್ರದೇಶದ ಸೀತಾಪುರದಲ್ಲಿ ಮೋಹಿನಿ ಪಾಂಡೆ ಮತ್ತು ಗೋಪಿಚಂದ್ ಪಾಂಡೆ ದಂಪತಿಯ ಮಗನಾದ ಇವರು, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಆಫ್ ಸೈನಿಕ ಸ್ಕೂಲನಲ್ಲಿ ಶಿಕ್ಷಣ ಪಡೆದವರು, ಇವರ ಸಹೋದರ ಮನ್ಮೋಹನ್ ಪಾಂಡೆ.
ತನ್ನ 22 ನೇ ವಯಸ್ಸಿನಲ್ಲಿ ಸೇನೆಗೆ ಸೇರಬೇಕೆಂದು ಬಂದಾಗ ತನಗೆ ಕೊಟ್ಟ ಎಲ್ಲ ಪರೀಕ್ಷೆ ಪಾಸಾಗಿ ಕೊನೆಗೆ ಕೆಲ ಅಧಿಕಾರಿಗಳು ಅವನಿಗೆ “ನೀನು ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದರೆ ಒಳ್ಳೆಯ ಸಂಬಳ ಸಿಗುತ್ತಲ್ಲ” ಎಂದಾಗ ‘ನನಗೆ ಬೇಕಾಗಿರುವ ಪರಮ್ ವೀರ್ ಚಕ್ರವನ್ನು ಕೇವಲ ಇಲ್ಲಿ ಮಾತ್ರ ಅದನ್ನು ಪಡೆಯಬಹುದು. ಅದಕ್ಕೆ ಸೈನ್ಯಕ್ಕೆ ಸೇರಿದೆ’ ಎಂದು ಹೇಳಿದ.
ಅವನ ಅದೃಷ್ಟವೋ ದುರಾದೃಷ್ಟವೋ ಸೇನೆಗೆ ಸೇರಿದ ಎರಡೇ ವರ್ಷದಲ್ಲಿ ಕಾರ್ಗಿಲ್ ಯುದ್ಧ ನಡೆಯಿತು. ಆತ ಮತ್ತು ಅವನ ಸಂಗಡಿಗರು ಅತ್ಯಂತ ಪ್ರೀತಿ ಮತ್ತು ಹುಮ್ಮಸ್ಸಿನಿಂದ ಯುದ್ಧಕ್ಕೆ ಹೊರಟರು. ಕಗ್ಗತ್ತಲಿನಲ್ಲಿ ಗುಡ್ಡವನ್ನೂ ಏರಿದರು. ಪಾಕಿಸ್ಥಾನದ ಸೈನಿಕರು ಗುಡ್ಡದ ಮೇಲೆ ಅಡಗಿ ಕುಳಿತು ಭಾರತೀಯ ಸೈನಿಕರ ಮೇಲೆ ದಾಳಿ ಮಾಡಲು ಸಿದ್ಧರಿದ್ದರು.
ಈತ ಗುಡ್ಡವನ್ನು ಏರಿ ತನ್ನ ಬ್ಯಾಗಿನಲ್ಲಿದ್ದ ಗ್ರೆನೇಡನ್ನು ತೆಗೆದು ಪಾಕಿಸ್ಥಾನದ ಬಂಕರ್ ಮೇಲೆ ಎಸೆದ. ಬಂಕರ್ ಛಿದ್ರ-ಛಿದ್ರವಾಯಿತು. ಆದರೆ ಇನ್ನೊಂದು ಬಂಕರ್ನಿಂದ ಬಂದ ಗುಂಡೊಂದು ಮನೋಜ್ನ ದೇಹ ತೂರಿ ಅವನ ಬಲಗೈ ನೇತಾಡತೊಡಗಿತು. ಆತ ಆ ಸ್ಥಿತಿಯಲ್ಲಿಯೇ ತನ್ನ ಸ್ನೇಹಿತರಿಗೆ ಹೇಳಿದ “ನನ್ನ ಈ ಬಲಗೈ ತುಂಬಾ ತೊಂದರೆ ಕೊಡ್ತಿದೆ ಇದನ್ನು ನನ್ನ ಸೊಂಟಕ್ಕೆ ಕಟ್ಟಿ ಎಂದು. ತನ್ನ ಎಡಗೈಯಿಂದ ಇನ್ನೊಂದು ಗ್ರೆನೇಡ್ ತೆಗೆದು ಎಸೆಯುವಷ್ಟರಲ್ಲಿ ಎದುರಿನಿಂದ ಬಂದ ಬುಲೆಟ್ ಅವನ ತಲೆಯನ್ನು ಛೇದಿಸಿ ಬಿಡುತ್ತದೆ. ಆತ ನೆಲಕ್ಕೆ ಉರುಳುತ್ತ ಹೇಳಿದ್ದು ‘ನ ಛೋಡ್ನ’ ಬಿಡಬೇಡಿ ಅವರನ್ನು ಒಬ್ಬೊಬ್ಬರನ್ನೂ ಕೊಲ್ಲಿ ಎಂದು.
ಹೀಗೆ ಹೇಳುತ್ತ ಈ ಗುಡ್ಡ ನಮ್ಮದಾಯಿತು ಎಂದು ಭಾರತದ ಬಾವುಟ ಹಾರಿಸಿ ತಾಯಿ ಭಾರತಾಂಬೆಗೆ ಆತ್ಮಾರ್ಪಣೆ ಮಾಡುತ್ತಾನೆ. ಈತ ತನ್ನ ಡೈರಿಯಲ್ಲಿ ಹೀಗೆ ಬರೆದುಕೊಂಡಿದ್ದ “ಅಕಸ್ಮಾತಾಗಿ ನನ್ನ ರಕ್ತದ ತಾಕತ್ತು ತೋರಿಸುವ ಮುನ್ನ ಸಾವು ನನ್ನ ಮುಂದೆ ಬಂದರೆ ಸಾವನ್ನೇ ಸಾಯಿಸಿಬಿಡುತ್ತೇನೆ” ಹೌದು, ಈತ ಸಾವಿಗೇ ಸವಾಲೊಡ್ಡಿದ ವೀರ. ಬರೆದಂತೇ ನಡೆದ. ಇಂತಹ ವೀರನನ್ನು ಕಾರ್ಗಿಲ್ ಯುದ್ಧದಲ್ಲಿ ಕಳೆದುಕೊಂಡೆವು.
ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಧೈರ್ಯ ಮತ್ತು ನಾಯಕತ್ವಕ್ಕಾಗಿ ಮರಣೋತ್ತರವಾಗಿ ಭಾರತದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮ್ ವೀರ್ ಚಕ್ರವನ್ನು ನೀಡಲಾಯಿತು. (ಸಂಗ್ರಹ ಚಿತ್ರಗಳನ್ನು ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..