ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಕರೊನಾ ಲಸಿಕಾಕರಣ ಕಾರ್ಯವು ಅತ್ಯಂತ ಭರದಿಂದ ಸಾಗುತ್ತಿದ್ದು, ಜಲ್ಲೆಯ 6 ತಾಲೂಕುಗಳಲ್ಲಿ ಈವರೆಗೆ(ಆಗಸ್ಟ್ 3 ರ ಅಂತ್ಯಕ್ಕೆ) ಒಟ್ಟು 6.08 ಲಕ್ಷ ಮಂದಿಗೆ ಕೋರೊನಾ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 6,08,337 ಜನರಿಗೆ ಉಚಿತ ಲಸಿಕೆ ಹಾಕಲಾಗಿದೆ. ಈ ಪೈಕಿ 4,75,922 ಮಂದಿಗೆ ಮೊದಲ ಡೋಸ್ ಮತ್ತು 1,32,415 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಬಾಗೇಪಲ್ಲಿ ತಾಲೂಕಿನಲ್ಲಿ 71,482 ಮಂದಿಗೆ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1,28,410 ಚಿಂತಾಮಣಿ ತಾಲೂಕಿನಲ್ಲಿ 1,49,268 ಮಂದಿಗೆ, ಗೌರಿಬಿದನೂರು ತಾಲೂಕಿನಲ್ಲಿ 1,35,412 ಮಂದಿಗೆ, ಗುಡಿಬಂಡೆ ತಾಲೂಕಿನಲ್ಲಿ 30,726 ಮಂದಿಗೆ ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 93,039 ಜನರಿಗೆ ಲಸಿಕಾಕರಣ ಮಾಡಲಾಗಿದೆ.
ಲಸಿಕಾ ಮೇಳಗಳಿಗೆ ಉತ್ತಮ ಸ್ಪಂದನೆ: ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕೆಂಬ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಾಧ್ಯಂತ ಆಯೋಜನೆ ಮಾಡಲಾಗುತ್ತಿರುವ ಉಚಿತ ಲಸಿಕಾ ಮೇಳಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಎಲ್ಲಾ ಕಡೆ ಸ್ವಯಂ ಪ್ರೇರಿತವಾಗಿ ಬಂದು ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಹಲವು ಆಸ್ಪತ್ರೆ, ಕಾಲೇಜುಗಳಲ್ಲಿ ಲಸಿಕಾ ಮೇಳಗಳನ್ನು ಆಯೋಜನೆ ಮಾಡಿ, ಅಗತ್ಯವುಳ್ಳವರಿಗೆ ಲಸಿಕೆ ಹಾಕಲಾಗಿದ್ದು, ಈ ಹಿಂದೆ ಜೂನ್ 21 ರಂದು ಮೇಗಾ ಲಸಿಕಾ ಮೇಳ ಆಯೋಜಿಸಿ ಅತಿಹೆಚ್ಚು ಜನರಿಗೆ ಲಸಿಕೆ ಹಾಕಿದ ಶೇಕಡಾವಾರು ಪ್ರಮಾಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು. ಅದೇ ರೀತಿ ಆಗಸ್ಟ್ 2 ರಂದು ಆಯೋಜಿಸಿದ್ದ 2ನೇ ಮೇಗಾ ಲಸಿಕಾ ಮೇಳದಲ್ಲಿ 21 ಸಾವಿರ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಸದರಿ ಗುರಿಯನ್ನು ಮೀರಿ ಒಟ್ಟು 23,196 ಮಂದಿಗೆ ಕೊರೊನಾ ಲಸಿಕೆ ಹಾಕಿಸುವ ಮೂಲಕ ಜಿಲ್ಲಾಡಳಿತ ಉತ್ತಮ ಸಾಧನೆಗೈದಿದೆ.ಲಸಿಕಾ ಕರಣ ಯಶಸ್ವಿಗೆ ಸಹಕರಿಸಿದ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.
ಮೇಳದಲ್ಲಿ ಒಟ್ಟಾರೆಯಾಗಿ ಬಾಗೇಪಲ್ಲಿಯಲ್ಲಿ 3834, ಚಿಕ್ಕಬಳ್ಳಾಪುರದಲ್ಲಿ 3368, ಚಿಂತಾಮಣಿಯಲ್ಲಿ 5863, ಗೌರಿಬಿದನೂರಿನಲ್ಲಿ 5231, ಗುಡಿಬಂಡೆಯಲ್ಲಿ 1098 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 3802 ಜನರಿಗೆ ಉಚಿತ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..