ದೊಡ್ಡಬಳ್ಳಾಪುರ: ತಾಲೂಕಿನ ಜೆಡಿಎಸ್ ಪಕ್ಷಕ್ಕೆ ಶಾಪವಾಗಿದ್ದ ಭಿನಮತವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ರಾಜಿಪಂಚಾಯಿತಿ ಮಾಡಿಸಿಕೊಂಡು ಬಂದಿದ್ದರು, ಬಹಿರಂಗವಾಗಿದ್ದ ಭಿನ್ನಮತವನ್ನು ಒಪ್ಪದ ಜೆಡಿಎಸ್ ಮುಖಂಡರು ಕೈ ಕೈ ಹಿಡಿದು ಪೋಟೋಗೆ ಫೋಸ್ ನೀಡಿದ ಘಟನೆ ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಡು ಬಂತು.
ನಗರಸಭೆ ಚುನಾವಣೆ ಹಾಗೂ ಬಿ.ಮುನೇಗೌಡ ಹಾಗೂ ಎಚ್.ಅಪ್ಪಯಣ್ಣ ಬಣದ ನಡುವಿನ ಬಿಕ್ಕಟ್ಟು ರಾಜಿಪಂಚಾಯಿತಿ ಮೂಲಕ ಸುಖಾಂತ್ಯ ಕಂಡಿರುವ ಕುರಿತಂತೆ ಜೆಡಿಎಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಯಿತು.
ಈ ವೇಳೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಜೆಡಿಎಸ್ ಮುಖಂಡರಲ್ಲಿ ಈಗ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಮುಖಂಡರೆಲ್ಲಾ ಒಂದಾಗಿದ್ದು, ನಗರಸಭೆ ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಕಾರ್ಯ ತಂತ್ರಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಸೆ.3ರಂದು ನಡೆಯಲಿರುವ ನಗರಸಭೆ ಚುನಾವಣೆಗೆ 31 ವಾರ್ಡ್‍ಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದ್ದು, ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಾಧನೆಗಳು ಹಾಗೂ ಈ ಹಿಂದೆ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದೇವೆ. ಈ ಚುನಾವಣೆಯಲ್ಲಿ 5 ಜನರು ಚುನಾವಣೆ ಪ್ರಚಾರ ನಡೆಸಬೇಕಿದ್ದು, ವಾರ್ಡ್ ಗೆ ಒಬ್ಬರು ಉಸ್ತುವಾರಿ ನೇಮಕ ಮಾಡಲಾಗಿದೆ.
ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಯಾವುದೇ ಬಣಗಳಾಗಿ ಇಬ್ಬಾಗವಾಗಿರಲಿಲ್ಲ. ಈ ಬಾರಿಯೂ ಜೆಡಿಎಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ತಾಲೂಕಿನಲ್ಲಿ ಎಲ್ಲರು ಒಟ್ಟಾಗಿ ಪಕ್ಷ ಸಂಘಟಿಸುವ ಮೂಲಕ ನಗರಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ವಿಧಾನಸಭೆ ಚುನಾವಣೆಗಳನ್ನು ಎದುರಿಸಲಿದ್ದೇವೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಮಾತನಾಡಿ, ಈ ಹಿಂದೆ ಪಕ್ಷದಲ್ಲಿ ಇದ್ದ ಗೊಂದಲವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಬಗೆ ಹರಿದಿದ್ದು, ಅವರ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ತಿಳಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ, ನಗರಸಭೆಯ ಚುಕ್ಕಾಣಿ ಹಿಡಿಯಲು ಎಲ್ಲಾ ಕಾರ್ಯಕರ್ತರು, ಮುಖಂಡರು ಶ್ರಮಿಸಲಿದ್ದಾರೆ ಎಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿ ರವಿಕುಮಾರ್ ಮಾತನಾಡಿ, ಕಳೆದ ಎರಡು ಅವಧಿಯಲ್ಲಿ ನಗರಸಭೆ ಆಯ್ಕೆಯಾದ ಜೆಡಿಎಸ್ ಸದಸ್ಯರು, ಅಧ್ಯಕ್ಷರು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಅದರ ಮಾನದಂಡದಡಿಯಲ್ಲಿ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತಿದೆ. 2013ರಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಎರಡು ಅವಯಲ್ಲಿ ಪಕ್ಷದ ಶಂಷುನ್ನಿಸಾ, ಟಿ.ಎನ್.ಪ್ರಭುದೇವ್ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ನಗರಸಭೆಗೆ ಬರಬೇಕಾದ ಆದಾಯ ಮೂಲಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಕಂದಾಯ ಸೋರಿಕೆ ತಡೆಗಟ್ಟುವುದು, ಬ್ಯಾಂಕ್ ಕೌಂಟರ್ ಸ್ಥಾಪನೆ ಮಾಡಲಾಗಿತ್ತು. ಬೀದಿ ಬದಿವ್ಯಾಪಾರಿಗಳಿಗೆ 10 ಸಾವಿರ ರೂ ನೆರವು ಸೇರಿದಂತೆ ವಿಶೇಷ ಅನುದಾನಗಳನ್ನು ತರಲಾಗಿತ್ತು. ಈ ಖಾತೆ, ಆಂದೋಲನ, ಒಳಚರಂಡಿ ವ್ಯವಸ್ಥೆ, ನೀರಿನ ತೆರಿಗೆ ಸಂಗ್ರಹಣೆಗೆ ಒತ್ತು ನೀಡಲಾಗಿತ್ತು. ಜೆಡಿಎಸ್‍ನ ನಗರಸಭೆ ಮಾಜಿ ಸದಸ್ಯರು, ಪದಾಕಾರಿಗಳು, ಕಾರ್ಯಕರ್ತರ ಸಹಯೋಗದಲ್ಲಿ ನಗರಸಭೆ ಚುನಾವಣೆ ಎದುರಿಸಿ, ಅಕಾರಕ್ಕೆ ಬರಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸಿ.ಲಕ್ಷ್ಮೀಪತಯ್ಯ, ,ಕಾರ್ಯಾಧ್ಯಕ್ಷ ಆರ್.ಕೆಂಪರಾಜ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್.ಪ್ರಭುದೇವ್, ಜೆಡಿಎಸ್ ಮುಖಂಡರಾದ ಡಾ.ಎಚ್.ಜಿ.ವಿಜಯ ಕುಮಾರ್, ಹರೀಶ್ ಗೌಡ, ಜಿ.ಸತ್ಯನಾರಾಯಣ್, ಅಂಜನಗೌಡ, ಲಕ್ಷ್ಮೀನಾರಾಯಣ್, ಲೋಕೇಶ್, ಶ್ರೀನಿವಾಸ್, ಜಿ.ಸಿದ್ದಪ್ಪ, ಕೆಸ್ತೂರು ರಮೇಶ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….