ದೊಡ್ಡಬಳ್ಳಾಪುರ: ನಮ್ಮೂರಿಗೆ ಏಕೆ ಈ ಹೆಸರು ಬಂತು, ನಮ್ಮ ಪೇಟೆಯನ್ನು ಏಕೆ ಈ ಹೆಸರಿನಿಂದ ಕರೆಯುತ್ತಾರೆ ಇಂತಹ ಹತ್ತಾರು ಪ್ರಶ್ನೆಗಳು ಯಾರಿಗಾದರೂ ಕಾಡದೇ ಇರಲಾರದು. ಇದನ್ನು ತಿಳಿದುಕೊಳ್ಳುವ ಕುತೂಹಲವು ಇದ್ದೇ ಇರುತ್ತದೆ. ಇಂತಹ ಪ್ರಶ್ನೆಗಳಿಗೆಲ್ಲ ಉತ್ತರವನ್ನು ತಿಳಿಸುವುದೇ ‘ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು’ ಭಾಷೆ ಚರಿತ್ರೆ ಮತ್ತು ಸಂಸ್ಕೃತಿ-ಒಂದು ವಿಶ್ಲೇಷಣೆ ಪುಸ್ತಕದ ವಿಶೇಷವಾಗಿದೆ.
ಸ್ಥಳನಾಮಗಳ ಅಧ್ಯಯನ ಯಾವತ್ತೂ ಕುತೂಹಲ,ಆಸಕ್ತಿಯನ್ನು ಕೆರಳಿಸುವಂಥದ್ದು. ಯಾವುದೇ ಸ್ಥಳನಾಮದ ಅಧ್ಯಯನವೆಂದರೆ ಅದು ಆ ನಿರ್ದಿಷ್ಟ ಸ್ಥಳದ ಸಂಸ್ಕೃತಿಯ ಅಧ್ಯಯನವೇ ಆಗಿರುತ್ತದೆ. ಏಕೆಂದರೆ ಸ್ಥಳನಾಮ ಮತ್ತು ಸಂಸ್ಕೃತಿ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಬಿಟ್ಟು ಇನ್ನೊಂದು ಇರಲಾರದು.ಇವುಗಳ ನಂಟು ಬಿಡಿಸಲಾಗದ ಗಂಟು. ಅಲ್ಲದೆ ಯಾವುದೇ ಸ್ಥಳನಾಮವು ಆ ಸ್ಥಳದ ‘ನೀಲಿ ನಕಾಶೆ’ ಇದ್ದಂತೆ ಎನ್ನುತ್ತಾರೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು ಪುಸ್ತಕದ ಲೇಖಕ ಡಾ.ಎಸ್.ವೆಂಕಟೇಶ್.
ಸ್ಥಳದ ವಿಶಿಷ್ಟ ಭೂಗೋಳ, ಜನಾಂಗ,ಆ ಜನರ ರಾಜಕೀಯ,ಸಾಮಾಜಿಕ,ಧಾರ್ಮಿಕ,ಸಂಸ್ಕೃತಿಯ ಪ್ರಕಟಿತ ರೂಪವೆಂದರೂ ನಡೆಯುತ್ತದೆ. ಒಟ್ಟಾರೆ ಸ್ಥಳನಾಮದಲ್ಲಿ ಅಲ್ಲಿನ ಜನರ ಸಂಸ್ಕೃತಿಯೇ ಹೆಪ್ಪುಗಟ್ಟಿರುತ್ತದೆ. ಸ್ಥಳನಾಮಗಳು ಒದಗಿಸುವ ಸಾಂಸ್ಕೃತಿಕ ಮಾಹಿತಿ ಶಾಸನವಷ್ಟೇ ಏಕೆ, ಇನ್ನಷ್ಟು ವಿಶ್ವಸನೀಯವೆಂದೇ ಪರಿಗಣಿಸಲಾಗಿದೆ. ಏಕೆಂದರೆ ಶಾಸನಗಳು ಬರೆಯಲ್ಪಡುವ ಕಾಲಕ್ಕೆ ಮೊದಲೇ ಈ ಸ್ಥಳನಾಮಗಳು ಚಲಾವಣೆಯಲ್ಲಿದ್ದವು. ಅಷ್ಟೇ ಅಲ್ಲ ಇದೀಗ ಸಮಕಾಲೀನ ಮಾನದಂಡಗಳಿಂದ ಸ್ಥಳನಾಮಗಳು ಅರ್ಥಹೀನವೆಂದಾಗಿರಬಹುದಾದರೂ ಅವು ಸಾವಿರಾರು ವರ್ಷಗಳಿಂದ ಹಾಗೆಯೇ ಉಳಿದು ಬಂದಿರುತ್ತವೆ. ಸ್ಥಳನಾಮಗಳು ಆಯಾ ಸ್ಥಳದ ಗುರುತು ಪಟ್ಟಿಕೆಗಳಾಗಿರುವುದರಿಂದ ಅವು ಬದಲಾಗಲಾರವು. ಅವುಗಳನ್ನು ಬದಲಿಸುವ ಪ್ರಯತ್ನಗಳೂ ಫಲಿಸಲಾರವು. ಆದರೆ ಕನ್ನಡದ ಮಟ್ಟಿಗೆ ಇಂತಹ ಅಧ್ಯಯನ ಹೊಸದು. ಇದು ತೀರಾ ಇತ್ತೀಚೆಗೆ ಹುಟ್ಟಿಕೊಂಡಿರುವ ಜ್ಞಾನಶಾಖೆಯಾಗಿದೆ.
ಯಾವುದೇ ಒಂದು ನಿರ್ದಿಷ್ಟ ಸ್ಥಳಕ್ಕೆ ಹೆಸರು ತಟ್ಟನೆ, ಹಾಗೇ ಸುಮ್ಮನೆ ಬಂದಿರುವುದಿಲ್ಲ. ಸ್ಥಳನಾಮ ಎಂಬುದು ಕೇವಲ ಒಂದು ಪ್ರದೇಶದ ಹೆಸರಲ್ಲ. ಅದು ಆ ಪರಿಸರದ ಜೀವವೈವಿಧ್ಯತೆ, ಮಾನವರ ಸಾಂಸ್ಥಿಕ, ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆಯಿಂದ ಬಂದಿರುವಂಥದ್ದು.ಯಾವುದೇ ಊರಿನ ಹೆಸರು ಅಲ್ಲಿನ ನಗರ, ಪಟ್ಟಣ, ಹಳ್ಳಿ, ಮುದಾಯದಂತಹ ಜನವಸತಿ ಪ್ರದೇಶಗಳನ್ನು, ರಾಜ್ಯ ಮತ್ತು ರಾಜಧಾನಿಯಂಥ ಮುಖ್ಯ ಆಡಳಿತ ವಿಭಾಗವನ್ನು, ಅಣೆಕಟ್ಟು,ಅರಮನೆ, ವಿಮಾನ ನಿಲ್ದಾಣ, ಹೆದ್ದಾರಿ ಮುಂತಾದ ಮಾನವ ನಿರ್ಮಿತಿಗಳನ್ನು, ನದಿ, ತೊರೆ, ಕಾಲುವೆ, ಸಾಗರ, ಸಮುದ್ರ, ಪರ್ವತ, ಬೆಟ್ಟಗುಡ್ಡ, ಅರಣ್ಯ, ಇಳಿಜಾರಿನಂತಹ ಪ್ರಕೃತಿಯನ್ನು, ಯುದ್ದ ಭೂಪ್ರದೇಶದ ಗೆಲುವಿನಂತಹ ಸಾಧನೆಗಳನ್ನು, ಗತಿಸಿರುವ ಘಟನೆಗಳ ಇತಿಹಾಸ ಎಲ್ಲವನ್ನೂ ಒಳಗೊಂಡಿರುತ್ತದೆ. ಹೀಗಾಗಿಯೇ ಸ್ಥಳನಾಮವನ್ನು ಆ ಸ್ಥಳದ ಆತ್ಮ ಎನ್ನಬಹುದು. ಕೆಲವೊಮ್ಮೆ ಸ್ಥಳನಾಮದಿಂದ ಇಡೀ ಆ ಪ್ರದೇಶದ ಚರಿತ್ರೆಯೇ ಬಿಚ್ಚಿಕೊಳ್ಳುತ್ತದೆ. ಆ ಮೂಲಕ ಸ್ಥಳದ ಬಹುಮುಖವನ್ನು ಅನಾವರಣಗೊಳಿಸುತ್ತದೆ.
ತಾಲ್ಲೂಕಿನ ನಾಲ್ಕು ಹೋಬಳಿಯಗಳಲ್ಲಿನ ಗ್ರಾಮಗಳ ಹಾಗೂ ನಗರದಲ್ಲಿನ ಪೇಟೆ, ಬೀದಿಗಳಿಗೆ ಇರುವ ಹೆಸರುಗಳ ಮಹತ್ವವನ್ನು ವಾಸ್ತವಕ್ಕೆ ಹತ್ತಿರವಾಗಿ ಜನ ಸಾಮಾನ್ಯರಿಗು ಅರ್ಥವಾಗುವಂತೆ ತಿಳಿಸಿಕೊಡುವ ‘ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು’ ಪುಸ್ತಕ ನಮ್ಮೂರಿನ ಹೆಸರಿನ ಬಗ್ಗೆ ಇರುವ ಕುತೂಲಹಗಳನ್ನು, ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಿದೆ.
ಇಂದು ಪುಸ್ತಕ ಬಿಡುಗಡೆ: ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು ಪುಸ್ತಕ ಬಿಡುಗಡೆ ಸಮಾರಂಭ ಅ.20 ರಂದು ಬೆಳಿಗ್ಗೆ 10.30ಕ್ಕೆ ನಗರದ ಕನ್ನಡ ಜಾಗೃತ ಪರಿಷತ್ ಭವನದಲ್ಲಿ ನಡೆಯಲಿದೆ.
ಪುಸ್ತಕವನ್ನು ಬೆಂಗಳೂರು ವಿಶ್ವ ವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಡಾ.ಎಂ.ಜಮುನ ಹಾಗೂ ಗೌರಿಬಿದನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ಎಚ್.ಶಿವಶಂಕರೆಡ್ಡಿ ಬಿಡುಗಡೆ ಮಾಡಲಿದ್ದಾರೆ. ಶಾಸನತಜ್ಞ ಡಾ. ಎಚ್.ಎಸ್.ಗೋಪಾಲರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುಸ್ತಕ ಕುರಿತು ಕೆಎಎಸ್ ಅಧಿಕಾರಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ, ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ, ಚಿಂತಕ ಯೋಗೇಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….