ದೊಡ್ಡಬಳ್ಳಾಪುರ: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸಾಹಿತ್ಯ ಭವನ ನಿರ್ಮಾಣ, ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಪ್ರಯತ್ನ, ಸಾಹಿತ್ಯದ ಚಟುವಟಿಕೆಗಳು ಒಂದೆಡೆಗೆ ಸೀಮಿತವಾಗದೇ ಜಿಲ್ಲೆಯ ಎಲ್ಲ ಕಡೆ ವಿಸ್ತರಿಸಲು ಕ್ರಮ ವಹಿಸುವುದು ಸೇರಿದಂತೆ ಕನ್ನಡ ಸಾಹಿತ್ಯ, ನಾಡು ನುಡಿಗಳ ಕುರಿತಾಗಿ ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಪ್ರಣಾಳಿಕೆ ಮೂಲಕ ಭರವಸೆ ನೀಡಲಾಗುತ್ತಿದ್ದು, ನ.21ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೆ.ಮಹಾಲಿಂಗಯ್ಯ ತಿಳಿಸಿದರು.
ಕನ್ನಡ ಜಾಗೃತ ಭವನದಲ್ಲಿ ನಡೆದ ಸಮಾನ ಮನಸ್ಕರ ಸಭೆ ಹಾಗೂ ಸುದ್ಧಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದಿನ ಅಧ್ಯಕ್ಷರ ಕಾರ್ಯ ವೈಖರಿಯನ್ನು ಸಾಹಿತ್ಯ ಪರಿಷತ್ತಿನ ಸದಸ್ಯರು ಕಣ್ಣಾರೆ ಕಂಡಿದ್ದಾರೆ. ಹೀಗಾಗಿ ಸಾಹಿತ್ಯ ಪರಿಷತ್ತಿಗೆ ಹೊಸ ಕಾಯಕಲ್ಪ ನೀಡುವ ಅಗತ್ಯವಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾರತಮ್ಯ ಮಾಡದಂತೆ ಕಾರ್ಯಕ್ರಮಗಳನ್ನು ನಡೆಸುವುದು. ಎಲ್ಲಾ ತಾಲೂಕು ಪ್ರಮುಖರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದು. ಲೆಕ್ಕಪತ್ರಗಳನ್ನು ಪ್ರಾಮಾಣೀಕವಾಗಿ ನಿರ್ವಹಿಸಿ ಪರಿಷತ್ತಿಗೆ ಯಾವುದೇ ಕೆಟ್ಟ ಹಸರು ತಾರದೇ ಕಾರ್ಯ ನಿರ್ವಹಿಸುತ್ತೇನೆ.
ಈಗಾಗಲೇ ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ, ಪ್ರೌಢಶಾಲಾ ಶಿಕ್ಷಕರಾಗಿ ಶಾಲೆ ಅಭಿವೃದ್ದಿಗೆ ಶ್ರಮಿಸಿರುವ ಅನುಭವ ತಮಗಿದೆ. ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಜಾತಿ, ಧರ್ಮ, ರಾಜಕೀಯ ಮೊದಲಾಗಿ ಆದ್ಯತೆ ನೀಡದೇ ಕನ್ನಡ ನಾಡು ನುಡಿಗೆ ದುಡಿಯುವ ಆಶಯ ಹೊಂದಿರುವುದಾಗಿ ತಿಳಿಸಿದರು.
ಹಲವೆಡೆ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳು, ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ರ್ಪಸಿರುವವರಿಗೆ ಬೆಂಬಲ ಸೂಚಿಸಿ, ಮತಯಾಚನೆ ಮಾಡುತ್ತಿದ್ದು, ಈ ಬಗ್ಗೆ ತಮ್ಮ ನಿಲುವು ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತಾವುಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ರ್ಪಸಿರುವ ಯಾವುದೇ ಅಭ್ಯರ್ಥಿಗೆ ಬಹಿರಂಗ ಬೆಂಬಲ ಸೂಚಿಸಿ ಮತಯಾಚಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಮಾತನಾಡಿದ ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡುವ ಕುರಿತು ಜಿಲ್ಲೆಯಲ್ಲಿ ವಿವಿಧ ಸಭೆಗಳು ನಡೆದವಾದರೂ ಫಲಕಾರಿಯಾಗಲಿಲ್ಲ. ತಾಲೂಕಿನಿಂದ ಅಭ್ಯರ್ಥಯಾಗಿರುವ ಮಹಾಲಿಂಗಯ್ಯ ಅವರನ್ನು ಬೆಂಬಲಿಸಬೇಕಿದೆ ಎಂದರು.
ವಿಜ್ಞಾನ ಲೇಖಕ ಡಾ.ಎ.ಓ.ಆವಲ ಮೂರ್ತಿ ಮಾತನಾಡಿ, ಮಹಾಲಿಂಗಯ್ಯ ಅವರು ನೀಡಿರುವ ಭರವಸೆಗಳನ್ನು ಶೇ.80ರಷ್ಟಾದರೂ ಈಡೇರಿಸಿ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಶಿಕ್ಷಕ ಕನ್ನಡಿಗ ಬಸವರಾಜು ಮಾತನಾಡಿ, ಕನ್ನಡದ ಬಗ್ಗೆ ಅಪಾರ ಅಭಿಮಾನ ಪ್ರೀತಿ ಹೊಂದಿರುವ ಮಹಾಲಿಂಗಯ್ಯ ಅವರನ್ನು ಬೆಂಬಲಿಸಲು ನಾಲ್ಕು ತಾಲೂಕುಗಳ ಸದಸ್ಯರಿಗೆ ಮನವಿ ಮಾಡಿದ್ದು, ಉತ್ತಮ ಸ್ಪಂಧನೆ ವ್ಯಕ್ತವಾಗುತ್ತಿದೆ ಎಂದರು.
ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲ ಎ.ವಿ.ನೆಗಳೂರು, ಟಿ.ಸಿ.ವೆಂಕಟಾಚಲಪತಿ, ಭೀಮರಾಜ್, ಹಾಡೋನಹಳ್ಳಿ ನಾಗರಾಜ್, ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಡಿ.ವಿ.ಅಶ್ವತ್ಥಪ್ಪ, ಬಸವರಾಜು, ಸಂಪತ್‍ಕುಮಾರ್, ಎಸ್.ಆರ್.ಚಂದ್ರಪ್ಪ, ಪುಟ್ಟಬಸವರಾಜ್, ಪು.ಮಹೇಶ್, ಶಿವಕುಮಾರ್, ಮೊದಲಾದವರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……