ಚಿಕ್ಕಬಳ್ಳಾಪುರ: ತಾಲ್ಲೂಕಿನ ಶ್ರೀನಿವಾಸಸಾಗರ ಮತ್ತು ರಂಗಧಾಮ ಕೆರೆಗೆ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಯಾವುದೇ ಹಾನಿಯಾಗಿಲ್ಲ, ಎರಡೂ ಕೆರೆಗಳ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲಾಗಿದ್ದು ಎರಡೂ ಕೆರೆಕಟ್ಟೆಗಳು ಸುರಕ್ಷಿತವಾಗಿವೆ. ನೆರೆ ಹಾವಳಿಯನ್ನು ಎದುರಿಸಲು ಜಿಲ್ಲಾಡಳಿತ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ.ಸಾರ್ವಜನಿಕರು ಯಾವುದೇ ಗಾಳಿಸುದ್ದಿಗಳಿಗೆ ಕಿವಿಗೊಡಬಾರದೆಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಶ್ರೀನಿವಾಸಸಾಗರ ಮತ್ತು ರಂಗಧಾಮ ಕೆರೆಗಳಿಗೆ ಭೇಟಿ ನೀಡಿ ಕೆರೆಕಟ್ಟೆಗಳನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ತಾಲ್ಲೂಕಿನ ಶ್ರೀನಿವಾಸಸಾಗರ ಕೆರೆ ಮತ್ತು ರಂಗಧಾಮ ಕೆರೆಗಳ ಕಟ್ಟೆಗಳಿಗೆ ಮಳೆಯಿಂದ ಹಾನಿಯಾಗಿದೆ ಎಂಬ ವದಂತಿಗಳು ಹರಡಿದ್ದ ಹಿನ್ನೆಲೆಯಲ್ಲಿ ಕೂಡಲೇ ಎರಡೂ ಕೆರೆಕಟ್ಟೆಗಳನ್ನು ಖುದ್ದು ಪರಿಶೀಲಿಸುವಂತೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎರಡೂ ಕೆರೆಗಳ ಪ್ರದೇಶಕ್ಕೆ ಸಣ್ಣ ನೀರಾವರಿ ಇಲಾಖೆ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಎರಡೂ ಕೆರೆಗಳು ಸುರಕ್ಷಿತವಾಗಿವೆ. ಮಳೆಯಿಂದ ಕೆರೆಗಳ ಕಟ್ಟೆಗಳಿಗೆ ಯಾವುದೇ ಹಾನಿಯಾಗಿಲ್ಲ. ಈ ಕೆರೆಗಳಿಗೆ ಹಾನಿಯಾಗಿದೆ ಎಂದು ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಷ್ಟೇ. ಇಂತಹ ಗಾಳಿ ಮಾತುಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಇಂತಹವುಗಳನ್ನು ಯಾವುದೇ ಕಾರಣಕ್ಕೂ ಹರಡಬಾರದು ಎಂದು ತಿಳಿಸಿದರು.
ನೆರೆ ಹಾವಳಿ ಎದುರಿಸಲು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ: ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಧಾರಕಾರ ಮಳೆಗೆ ನಗರದ ಹಳವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಆ ಪ್ರದ್ರೇಶಗಳಿಗೆ ಹಾಗೂ ಶ್ರೀ ನಿವಾಸ ಸಾಗರ ಮತ್ತು ರಂಗಧಾಮ ಕೆರೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದೇ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಮತ್ತು ಪರಿಹಾರ ಕ್ರಮಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.
ಬಾರೀ ಮಳೆಯಿಂದ ಎಂ.ಜಿ.ರಸ್ತೆಯಲ್ಲಿರುವ ಡಿವೈನ್ ಸಿಟಿಗೆ ನೀರು ನುಗ್ಗಿದ್ದು ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ನಂತರ ನಿಮ್ಮಾಕಲಕುಂಟೆ, ವಿನಾಯಕ ಲೇಔಟ್, ಕಣಜೇನಹಳ್ಳಿ, ಕಂದವಾರ ಕೆರೆ, ಬಿಬಿ ರಸ್ತೆಯ ಶನಿಮಹಾತ್ಮಾ ಸ್ವಾಮಿ ದೇವಾಲಯದ ಬಳಿ ಕಂದವಾರ ಕೆರೆಯಿಂದ ಗೋಪಾಲಕೃಷ್ಣ ಕೆರೆಗೆ ಹಾದು ಹೋಗುವ ರಾಜ ಕಾಲುವೆ, ಶ್ರೀನಿವಾಸ ಸಾಗರ ಮತ್ತು ರಂಗ ಧಾಮ ಕೆರೆಯನ್ನು ವೀಕ್ಷಿಸಿ ಅಧಿಕಾರಿಗಳಿಗೆ ನೆರೆಹಾವಳಿ ಎದುರಿಸುವ ಬಗ್ಗೆ ಸೂಚನೆ ನೀಡಿದರು.
ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ರಂಗಧಾಮ ಕೆರೆಯು ಕೋಡಿ ಹರಿದಿದ್ದ ಪರಿಣಾಮ ನಗರದ ಕಣಜೇನಹಳ್ಳಿ, ನಿಮ್ಮಾಕಲಕುಂಟೆ, ಡಿವೈನ್ ಸಿಟಿಗೆ ಸೇರಿದಂತೆ ಹಲವೆಡೆ ನೀರು ನುಗ್ಗಿದ್ದು, ಹಾನಿಯಾಗಿರುವಂತಹ ಪ್ರದೇಶಗಳಿಗೆ ಜಿಲ್ಲಾಧಿಕಾರಿಯವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನೂ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಪ್ರಕೃತಿ ವಿಕೋಪದಿಂದ ಎದುರಾಗುವ ಅನಾಹುತಗಳ ಬಗ್ಗೆ ಯಾವ ರೀತಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಯೋಜನಾ ವರದಿ ಸಲ್ಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ಯಾವ ಯಾವ ಕೆರೆ ಕಟ್ಟೆಗಳಲ್ಲಿ ಕೋಡಿ ಹರಿಯಬಹುದು ಎಂಬುದರ ಬಗ್ಗೆ ಮುಂಚಿತವಾಗಿಯೇ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದು ಅಗತ್ಯ ಮುನ್ನೆಚ್ಚರಿಕಾ ಸಿದ್ಧತೆ ಮಾಡಿಕೊಂಡು ಮುಂದಾಗಬಹುದಾದ ಅವಘಡಗಳನ್ನು ನಿವಾರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾದ ಹಾನಿಯ ವಿವರವನ್ನು ಪ್ರತಿ ದಿನ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿರುವ ಜನರಿಗೆ ಯಾವುದೇ ರೀತಿಯಾಗಿ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು ಯಾರು ಆತಂಕಪಡಬೇಕಾಗಿಲ್ಲ ಎಂದು ಜನರಲ್ಲಿ ಧೈರ್ಯ ತುಂಬಿದರು.
ಕಳೆದ 20-30 ವರ್ಷಗಳಿಂದ ತುಂಬದೇ ಇರುವಂತಹ ಕೆರೆಗಳು ತುಂಬಿರುವುದರ ಬಗ್ಗೆ ಖುಷಿಯಾಗಿದೆ.ಭಾರಿ ಮಳೆಯಿಂದಾಗಿ ರಾಜಕಾಲುವೆಯು ಬ್ಲಾಕ್ ಆಗದ ರೀತಿಯಲ್ಲಿ ನಿಗಾವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗಣಪತಿಶಾಸ್ತ್ರಿ, ಪೌರಾಯುಕ್ತರಾದ ಮಹಂತೇಶ್, ಎಚ್.ಎನ್ ವ್ಯಾಲಿ ಇಂಜಿನಿಯರ್ ರವಿಂದ್ರನಾಥ, ಸಣ್ಣ ನೀರಾವರಿ ಇಲಾಖೆಯ ಎಇಇ ಶ್ರೀನಿವಾಸರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ...