
ದೊಡ್ಡಬಳ್ಳಾಪುರ: ಕಳೆದ ಶನಿವಾರ ಸುರಿದ ಭಾರಿ ಮಳೆಗೆ ನಂದಿಬೆಟ್ಟದ ತಪ್ಪಲಿನಲ್ಲಿರುವ ಅರ್ಕಾವತಿ ನದಿಯ ಪಾತ್ರದ ಮೊದಲ ಕೆರೆಯಾದ, ಹೆಗ್ಗಡಿಹಳ್ಳಿ ಕೆರೆ 15 ವರ್ಷಗಳ ನಂತರ ಕೋಡಿ ಹರಿದ ಕಾರಣ ಇಂದು ಗ್ರಾಮಸ್ಥರು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ಮಹಿಳೆಯರು ಹೂವಿನ ಅಲಂಕಾರದಿಂದ ಸಿಂಗರಿಸಿದ ತಂಬಿಟ್ಟು ದೀಪಾರತಿಯೊಂದಿಗೆ ಬಾಗಿನ ಅರ್ಪಿಸಿದರೆ, ಕಾರ್ಯಕ್ರಮದ ಅಂಗವಾಗಿ ಗಂಗಮ್ಮ ದೇವತೆಯ ಮೆರವಣಿಗೆ ಮಾಡಲಾಯಿತು.
ಪಂಚಗಿರಿ ಶ್ರೇಣಿಯ ವಿಶ್ವ ವಿಖ್ಯಾತ ನಂದಿಬೆಟ್ಟದಲ್ಲಿ ಪಂಚನದಿಗಳ ಒಂದಾದ ಅರ್ಕಾವತಿ ನದಿ ಉಗಮವಾದ ನಂತರ ಹೆಗ್ಗಡಿಹಳ್ಳಿ ಕೆರೆಗೆ ಹರಿಯಲಿದೆ. ನಂತರ ದೊಡ್ಡಬಳ್ಳಾಪುರ ನಾಗರಕೆರೆ, ಮೂಲಕ ತಿಪ್ಪಗೊಂಡಹಳ್ಳಿ ಜಲಾಶಯ ಸೇರುತ್ತದೆ.
ಹಲವು ವರ್ಷಗಳ ನಂತರ ಅರ್ಕಾವತಿ ನದಿಗೆ ಮತ್ತೆ ಜೀವಕಳೆ ಬಂದು, ಅಂತರ್ಜಲ ಮಟ್ಟ ಹೆಚ್ಚಾಗುತ್ತಿರುವುದು ನದಿ ಪಾತ್ರದ ಜನರಲ್ಲಿ ಮಂದಹಾಸ ಮೂಡಿದೆ.
ಕೆರೆಯ ಕಾಯಕಲ್ಪಕ್ಕೆ ಆಗ್ರಹ: ಕೆರೆಯ ಕಟ್ಟೆಯ ಸುತ್ತ ಮುತ್ತ ಗಿಡ ಗೆಂಟೆ ಹೇರಳವಾಗಿ ಬೆಳೆದಿದ್ದು, ಕೋಡಿ ಸಹ ಕಿತ್ತು ಬಂದಿರುವ ಕಾರಣ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಈ ಕುರಿತಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೆ ಕೆರೆಯ ಅಭಿವೃದ್ಧಿಗೆ ಕಾಮಗಾರಿ ನಡೆಸುವಂತೆ ಗ್ರಾಮದ ಯುವಕರಾದ ಮನೋಜ್ ಹಾಗೂ ಗೆಳೆಯರು ಒತ್ತಾಯಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……